• first
  second
  third
  previous arrow
  next arrow
 • ಬೆಳೆಯೂರು ವೇಷ ಭೂಷಣಗಳಿಗೆ ಬೆಳಕಾಯ್ತು ಸೋಲಾರ್! ಸೆಲ್ಕೋ, ಬಿವಿಟಿಯ ಅನನ್ಯ ಕೊಡುಗೆ

  300x250 AD

  ಸಾಗರ: ಅಪರೂಪದ ಕೆತ್ತನೆಗಳನ್ನು ಮಾಡುವಾಗ ಈಗ ಆಧುನಿಕ ಉಪಕರಣಗಳನ್ನು ಬಳಸುವದು ವಾಡಿಕೆ. ಆದರೆ, ಕುಶಲ ಕೆಲಸ ಮಾಡುವಾಗ ಯಂತ್ರಗಳಿಗೆ ಬೇಕಾದ ವಿದ್ಯುತ್ ಕೈಕೊಟ್ಟರೆ ಅದರ ಮುಂದುವರಿಕೆ ಸೃಜನಶೀಲ ಮನಸ್ಸುಗಳಿಗೆ ಕಷ್ಟವಾಗುತ್ತದೆ.
  ಆದರೆ, ಇದನ್ನು ನೀಗಿಸಲು ಈಗ ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ ಸೌರ ಶಕ್ತಿಯ ಮೂಲಕ ಇಲ್ಲೊಬ್ಬ ಕಲಾವಿದರೊಂದಿಗೆಕೈ ಜೋಡಿಸಿದೆ. ಸೂರ್ಯನಿಗೇ ಪ್ಲಗ್ ಹಾಕಿ ಶಕ್ತಿ ಹಾಗೂ ಕೆಲಸಕ್ಕೆ ಬೇಕಾದ ಬೆಳಕನ್ನೂ ಒದಗಿಸುತ್ತಿದೆ.

  ಕುಸುರಿಯ ಸಂಭ್ರಮ:
  ಯಕ್ಷಗಾನದ ರಂಗು ರಂಗಿನ ವೇಷ ಭೂಷಣಗಳನ್ನು ಬೆರಳೆಣಿಕೆಯ ಕಲಾವಿದರು ಕರುನಾಡಿನಲ್ಲಿ ಮಾಡುತ್ತಾರೆ. ಅದರಲ್ಲೂ ಅಪರೂಪದ ಸಂಪ್ರದಾಯ ಬದ್ಧ ಕುಸುರಿಯ ಕಲಾ ಕೆತ್ತನೆಗಳನ್ನು ಮಾಡುವ ಕಲಾವಿದರಲ್ಲಿ ತಾಲೂಕಿನ ಬೆಳೆಯೂರಿನ ಸಂಜಯಕುಮಾರ ರಂಗನಾಥ ಅವರೂ ಒಬ್ಬರು.

  ಸಂಜಯ ಅವರು ಯಕ್ಷಗಾನ ಕಲಾ ಮೇಳಗಳಿಗೆ, ಹವ್ಯಾಸಿ ಕಲಾವಿದರುಗಳಿಗೆ ಸಂಪ್ರದಾಯ ಹಾಗೂ ಆಧುನಿಕ ಬಗೆಯ ಯಕ್ಷಗಾನ ವೇಷಭೂಷಣಗಳನ್ನು ಸಿದ್ಧಗೊಳಿಸಿ ಕೊಡುತ್ತಿದ್ದರು.

  ಬೆಳೆಯೂರಿನ ವೇಷ ಭೂಷಣಗಳು ಅನಿವಾಸಿ ಭಾರತೀಯರಿಗೂ ತಲುಪಿದೆ. ಅಮೇರಿಕಾ, ಕೆನಡಾ, ಸಿಂಗಾಪುರ, ದುಬೈ, ಜರ್ಮನಿ ಸೇರಿದಂತೆ ಹಲವಡೆಯ ಕಲಾಸಕ್ತರೂ ಒಯ್ದಿದ್ದಾರೆ. ನಾಡಿನ ಪ್ರಸಿದ್ಧ ಕಲಾವಿದರಿಗೂ ಸಂಜಯಕುಮಾರರು ಸಿದ್ದಗೊಳಿಸುವ ವೇಷ ಭೂಷಣಗಳು ಎಂದರೆ ಬಹು ಇಷ್ಟ. ಪಾತ್ರದ ಚೌಕಟ್ಟು ಮೀರದಂತೆ ವೇಷಭೂಷಣಗಳ ಕಲಾರ್ಹತೆಯನ್ನು ಹೆಚ್ಚಿಸುವಲ್ಲಿ ಸದಾ ಕ್ರಿಯಾಶೀಲರಾಗಿ ತೊಡಗಿಕೊಳ್ಳುವದು ಸಂಜಯ ಅವರ ರೂಢಿ.

  ಸಮಸ್ಯೆಯೇ ಬದುಕಾಯಿತು:
  ಎರಡು ನೂರು ವರ್ಷಗಳಿಗೂ ಅಧಿಕ ಇತಿಹಾಸ ಇರುವ ಬೆಳೆಯೂರಿನ ಶ್ರೀಮಹಾಗಣಪತಿ ಯಕ್ಷಗಾನ ಮಂಡಳಿಯ ಮೇಳದಲ್ಲಿ 25 ವರ್ಷಗಳ ಕಾಲ ಸುದೀರ್ಘ ಯಜಮಾನರಾಗಿ ಕೆಲಸ ಮಾಡಿದ ರಂಗನಾಥ ಹಾಗೂ ಜಯಲಕ್ಷ್ಮೀ ಅವರ ಪುತ್ರ ಸಂಜಯ. ಇವರೂ ತಮ್ಮ 18ನೇ ವರ್ಷಕ್ಕೇ ಯಕ್ಷಗಾನದ ಗೆಜ್ಜೆ ಕಟ್ಟಿದವರು. ಕೆರೆಮನೆ, ಕೊಂಡದಕುಳಿ, ಯಾಜಿ ಮೇಳಗಳಲ್ಲಿ ಕೆಲಸ ಮಾಡಿದವರು. ಬಲರಾಮ, ಕೌರವ, ಭೀಮ, ದುಷ್ಟಬುದ್ಧಿ, ವಾಲಿ, ಸುಗ್ರೀವ ಹಾಗೂ ಮತ್ತಿತರ ಪಾತ್ರಗಳ ಮೂಲಕ ಜನ ಮಾನಸದಲ್ಲಿ ನಿಂತವರು.

  ರಾತ್ರಿ ಯಕ್ಷಗಾನ ವೇಷ ಮಾಡಿದರೂ ಸಂಜಯ ಹಗಲಿನಲ್ಲಿ ಅದಕ್ಕೆ ಬೇಕಾದ ವೇಷಭೂಣ ಸಿದ್ಧಗೊಳಿಸಲು ತೊಡಗುತ್ತಾರೆ. ಯಕ್ಷಗಾನವನ್ನೇ ಉಸಿರಾಗಿಸಿಕೊಂಡು ಬದುಕು ನಡೆಸುತ್ತಿದ್ದಾರೆ. ಚೌಕಿಯಲ್ಲಿ ಸಿದ್ಧವಾಗುವ ವೇಷ, ರಂಗಸ್ಥಳದಲ್ಲಿ ಪಾತ್ರವಾಗಬೇಕು. ಪಾತ್ರವಾಗಲು ವೇಷ ಭೂಷಣಗಳೇ ತೊಡಕಾದಾಗ ಸ್ವತಃ ತಾವೇ ತಯಾರಿಸಿದರೆ ಹೇಗೆ ಎಂದು ಈ ಕೆಲಸಕ್ಕೆ ಅಡಿ ಇಟ್ಟರು. ಕಳೆದ 18 ವರ್ಷಗಳಿಂದ ಇದನ್ನೇ ವೃತ್ತಿಯಾಗಿಸಿಕೊಂಡಿದ್ದಾರೆ. ರಂಗಸ್ಥಳದ ಸಮಸ್ಯೆಯೇ ಇವರಿಗೆ ಬದುಕಿನ ದಾರಿಯೂ ಆಗಿಸಿತು.

  ಸಂಜಯ ಅವರು ಅನೇಕ ಸಂಕಷ್ಟಗಳ ಏಳು ಬೀಳಿನಲ್ಲೂ, ವಿದ್ಯುತ್ ಕೊರತೆಯ ನಡುವೆ ಕೂಡ ಸಾಧನೆಯ ಮನಸ್ಸಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಮಕ್ಕಳಿಂದ ದೊಡ್ಡವರ ತನಕ, ಪುರುಷ, ಸ್ತ್ರೀ, ದೈತ್ಯ, ಬಡಗು, ಬಡಾಬಡಗು, ಬಣ್ಣದ ವೇಷ ವೇಷಭೂಷಣಗಳನ್ನು ಬೇಡಿಕೆ ಆಧರಿಸಿ ಸಿದ್ಧಗೊಳಿಸುತ್ತಿದ್ದಾರೆ. ಮೂಡಲಪಾಯಕ್ಕೂ ಪರಿಕರಗಳನ್ನು ಸಿದ್ದಗೊಳಿಸಲು ಮುಂದಾಗಿದ್ದಾರೆ.

  300x250 AD

  ಲಾಕ್ ಡೌನ್ ನಲ್ಲಿ ಲಾಕ್:
  ಕಳೆದ ಎರಡು ವರ್ಷಗಳಿಂದ ಕೋವಿಡ್ ಸಂಕಷ್ಟದಲ್ಲಿ ಸಂಜಯರ ಬದುಕೂ ಸಂಕಷ್ಟದಿಂದ ಹೊರಗೆ ಇರಲಿಲ್ಲ. ಅಲ್ಲಿ ಇಲ್ಲಿ ವೇಷಭೂಷಣ ಸಿದ್ಧಗೊಳಿಸಲು ಬೇಡಿಕೆ ಬಂದರೂ ಪವರ್ ಸಮಸ್ಯೆ ಆಗುತ್ತಿತ್ತು.


  ಇದನ್ನು ಅರಿತ ಸೆಲ್ಕೋ ಫೌಂಡೇಶನ್ ಹಾಗೂ ಭಾರತೀಯ ವಿಕಾಸ ಟ್ರಸ್ಟ ಸಂಜಯಕುಮಾರರ ಬದುಕಿಗೆ ಭರವಸೆಯ ಹೊಸ ಬೆಳಕು ನೀಡಿತು. ಸೆಲ್ಕೋ ಸಂಸ್ಥಾಪಕ, ಸೌರವಿಜ್ಞಾನಿ ಡಾ. ಹರೀಶ್ ಹಂದೆ ಅವರ ಮಾರ್ಗದರ್ಶನದಲ್ಲಿ ಸೂರ್ಯನ ಶಕ್ತಿ ಯ ಬಳಕೆಯಿಂದ ಎಲ್ಲಾ ಪರಿಕರಗಳು ಸೌರಶಕ್ತಿಯಿಂದಲೇ ನಿರಂತರವಾಗಿ ನಡೆಯಲು ಕಾರಣವಾಯಿತು. ಸಂಜಯರಿಗೆ ಬದುಕಿನ ಭರವಸೆಯ ಶಕ್ತಿ ಹೆಚ್ಚಿಸಿತು. ಸೆಲ್ಕೋ ಮೂಲಕ ಟ್ರಸ್ಟ ಆರು ಸೌರ ವಿದ್ಯುತ್ ಫಲಕಗಳು ಬಳಸಿ ಒಂದುವರೆ ಕಿಲೋವ್ಯಾಟ್ ಸಾಮಥ್ರ್ಯದ ಸೌರ ಶಕ್ತಿ ಸುಮಾರು 2.40 ಲ.ರೂ. ಮೌಲ್ಯದಲ್ಲಿ ಜೋಡಿಸಿ ಬೆಳಕಾಗಿಸಿದೆ. ಬದುಕಿಗೆ ಆಧಾರವಾಗಿದೆ.

  ಸೌರ ಶಕ್ತಿಯ ವಿಸ್ತಾರ ರೂಪದ ಲೋಕಾರ್ಪಣೆ :
  ಡಿ.12ರ ಬೆಳಿಗ್ಗೆ 11ಕ್ಕೆ ಶಾಸಕ ಹರತಾಳು ಹಾಲಪ್ಪ ಅವರು ಬೆಳೆಯೂರಿನ ಯಕ್ಷಗಾನ ವೇಷಭೂಷಣಗಳ ತಯಾರಿಕಾ ಕೇಂದ್ರದ ಸೌರ ಶಕ್ತಿ ಘಟಕ ಲೋಕಾರ್ಪಣೆಗೊಳಿಸಲಿದ್ದಾರೆ.


  ಅತಿಥಿಗಳಾಗಿ ಕಲಾವಿದ, ಯಕ್ಷಗಾನ ನಾಟ್ಯ ಗಣಪತಿ ದೇವಸ್ಥಾನದ ಪ್ರಧಾನ ಅರ್ಚಕ, ಯಕ್ಷಗಾನದ ಹಿರಿಯ ಕಲಾವಿದ ವಿನಾಯಕ ಹೆಗಡೆ ಕಲಗದ್ದೆ, ಕಲಾವಿದೆ ವಸುದಾ ಶರ್ಮಾ, ಪತ್ರಕರ್ತ ರಾಘವೇಂದ್ರ ಬೆಟ್ಟಕೊಪ್ಪ, ಟ್ರಸ್ಟನ ಸುಧೀರ ಕುಲಕರ್ಣಿ ಪಾಲ್ಗೊಳ್ಳಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

  ಯಾವುದೇ ಕಲೆಯನ್ನು ಉಳಿಸುವ ಮಾತು ಎಲ್ಲಾ ಕಡೆ ಕೇಳುತ್ತೇವೆ. ಅದಕ್ಕಿಂತಮುಖ್ಯ ವಾದದ್ದು ಅವುಗಳನ್ನು ಆಧುನಿಕ ಚಿಂತನೆಯಿಂದ ಹಾಗೂ ತಾಂತ್ರಿಕತೆಯಿಂದ ಇನ್ನೂ ಹೆಚ್ಚು ಸಶಕ್ತಗೊಳಿಸಬೇಕಾಗಿದೆ.ಸೌರ ಶಕ್ತಿ ಎಂದರೆ ಕೇವಲ ಬೆಳಕಲ್ಲ. ಆ ಶಕ್ತಿ ಬಳಸಿ ಪರ್ಯಾಯ ಬಳಕೆಯ ವಿಸ್ತಾರಕ್ಕೆ ಇದೊಂದು ಉದಾಹರಣೆ. – ಹರೀಶ ಹಂದೆ, ಮ್ಯಾಗ್ಸಸೆ ಪ್ರಶಸ್ತಿ ಪುರಸ್ಕೃತರು

  ಕೋವಿಡ್ ಕಾಲ ಘಟ್ಟದಲ್ಲಿ ಯಕ್ಷಗಾನ ಕಾರ್ಯಕ್ರಮಗಳೂ ಇಲ್ಲ. ವೇಷಭೂಷಣಗಳ ಬೇಡಿಕೆ ಕೂಡ ಇಲ್ಲ. ದುರಸ್ತಿಗೆ ಬಂದವುಗಳ ರಿಪೇರಿಗೂ ವಿದ್ಯುತ್ ಸಮಸ್ಯೆ ಆಗುತ್ತಿತ್ತು. ಆಗ ಬದುಕಿನ ಭರವಸೆ ಕೊಟ್ಟಿದ್ದು ಬೆಂಗಳೂರಿನ ಡಾ. ಹರೀಶ್ ಹಂದೆಯವರ ಸೆಲ್ಕೋ ಫೌಂಡೇಶನ್ ಹಾಗೂ ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ. ಸೌರಶಕ್ತಿ ನನ್ನ ಬದುಕಿನ ಪಥವನ್ನೇ ಬದಲಿಸಿತು. – ಸಂಜಯಕುಮಾರ ಬಿಳಿಯೂರು, ಕಲಾವಿದ

  Share This
  300x250 AD
  300x250 AD
  300x250 AD
  Back to top