
ಶಿರಸಿ: ೯೬ ವರ್ಷದ ಅಜ್ಜಿಯೊಬ್ಬರಿಗೆ ಕೋವಿಡ್ ಸೋಂಕು ತಗುಲಿದ್ದರೂ ಕೊನೆಗೂ ಸೋಂಕು ಗೆದ್ದು ದಿನದ ಅವರ ಕೆಲಸಗಳನ್ನು ಅವರೇ ಮಾಡಿಕೊಳ್ಳುವಷ್ಟು ಗಟ್ಟಿಯಾದ ಘಟನೆ ತಾಲೂಕಿನ ಎಕ್ಕಂಬಿ ಸಮೀಪದ ಸಾಲೇಕೊಪ್ಪದಲ್ಲಿ ನಡೆದಿದೆ.
ಸಾಲೇಕೊಪ್ಪದ ಕುಳವೆ ಭಟ್ರಮನೆಯ ಹಿರಿಯಾಕೆ ಜಾಹ್ನವಿ ಗಜಾನನ ಭಟ್ಟ ಅವರಿಗೆ ಕಳೆದ ಮೇ ೩೧ರಂದು ಕೋವಿಡ್ ಸೋಂಕು ತಗುಲಿತ್ತು. ಸೋಂಕು ತಗುಲಿದ್ದು ತಿಳಿದಾಗ ಏನಾಗುತ್ತದೋ ಎಂದು ಮನೆಯವರೂ ಆತಂಕಿತರೂ ಆಗಿದ್ದರು. ಆದರೆ ಅಜ್ಜಿಯೇ ಹೆದರಿರಲಿಲ್ಲ. ಇದಕ್ಕಾಗಿ ಮನೆಯಲ್ಲೇ ಇರಿಸಿಕೊಂಡು ಚಿಕಿತ್ಸೆ ನೀಡಲಾಯಿತು. ಕಳೆದ ಹತ್ತು ದಿನಗಳ ಹಿಂದೆ ಅಜ್ಜಿಗೆ ಸೋಂಕು ಕಡಿಮೆ ಆಗಿ ಮಾಮೂಲಿ ಆಗಿದ್ದಾರೆ. ವಾಕರ್ ಹಿಡಿದು ಮನೆಯಲ್ಲೇ ಓಡಾಟ ಕೂಡ ಮಾಡುತ್ತಾರೆ. ೨೦೧೪ರಲ್ಲಿ ಜಾರಿ ಬಿದ್ದ ಪರಿಣಾಮ ಕಾಲಿನ ಮೂಳೆ ಶಸ್ತ್ರಚಿಕಿತ್ಸೆ ನಡೆದು ರಾಡ್ ಹಾಕಿಸಿಕೊಂಡಿದ್ದರು.
ಐದು ತಲೆಮಾರು ಕಂಡ ಅಜ್ಜಿ ಮೊಮ್ಮಗಳೂ ಅಜ್ಜಿಯಾಗಿದ್ದಾರೆ. ಜಾಹ್ನವಿ ಅಜ್ಜಿಯ ಮನೋಸ್ಥೈರ್ಯ ಈ ಎರಡೂ ಘಟನೆಯಿಂದ ಗೆಲ್ಲಿಸಿದೆ ಎನ್ನುತ್ತಾರೆ ಮೊಮ್ಮಗ ದಿವಸ್ಪತಿ ಭಟ್ಟ.
ಮನೆಯ ಮಕ್ಕಳಿಗೂ ಸೋಂಕು ತಗುಲಿದ್ದರಿಂದ ಅಜ್ಜಿಯ ಆರೈಕೆ ಮಾಡಲು ಸಮಸ್ಯೆಯೂ ಆಗಲಿಲ್ಲ ಎನ್ನುವ ಅವರು ಅಜ್ಜಿಯ ಲವಲವಿಕೆ, ಯಾವುದಕ್ಕೂ ಹೆದರಬಾರದು ಎನ್ನುವ ಗಟ್ಟಿತನ ನಮಗೆ ಸ್ಪೂರ್ತಿ ಎಂದೂ ಹೇಳುತ್ತಾರೆ