ಭಟ್ಕಳ: ತಮಿಳುನಾಡಿನ ಊಟಿಯ ಸಮೀಪದಲ್ಲಿ .ಭಾರತೀಯ ಸೇನೆಯ ಹೆಲಿಕ್ಯಾಪ್ಟರ್ ಪತನಗೊಂಡು ಹುತಾತ್ಮರಾದ ಭಾರತೀಯ ಸೇನೆಯ ಹೆಮ್ಮೆಯ ಪುತ್ರ ಜ. ಬಿಪಿನ್ ರಾವತ್ ಮತ್ತು ಅವರ ಪತ್ನಿ ಹಾಗೂ 13ಸೇನಾ ಸಿಬ್ಬಂದಿಗಳಿಗೆ ಭಟ್ಕಳ ಮಾಜಿ ಸೈನಿಕರ ಸಂಘ ಹಾಗೂ ವಿವಿಧ ಸಂಘಸಂಸ್ಥೆಗಳ ಪ್ರಮುಖರಿಂದ ಪುಷ್ಪನಮನ ಹಾಗೂ ಶ್ರದ್ಧಾಂಜಲಿ ಕಾರ್ಯಕ್ರಮ ಗುರುವಾರ ಸಂಜೆ ಇಲ್ಲಿನ ಪ್ರವಾಸಿ ಮಂದಿರದ ಎದುರಿಗಡೆಯಲ್ಲಿ ನಡೆಯಿತು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಭಟ್ಕಳ ತಾಲೂಕು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಎಂ.ಡಿ.ಫಕ್ಕಿ ಮಾತನಾಡಿ ಇಂದು ನಾವೆಲ್ಲರೂ ಶಾಂತಿಯುತವಾಗಿ ಜೀವನ ನಡೆಸಲು ಕಾರಣೀಕರ್ತರು ನಮ್ಮ ಹೆಮ್ಮಯ ಸೈನಿಕರು. ಅವರು ತಮ್ಮನ್ನು ಸುದೀರ್ಘ ದೇಶ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅಂತವರು ಮೊನ್ನೆ ನಡೆದ ದುರಂತದಲ್ಲಿ ಸಿಲುಕಿ ಮೃತಪಟ್ಟಿರುವುದು ದುಖಃಕರವಾದ ಸಂಗತಿಯಾಗಿದೆ.ಈ ದುರಂತದಲ್ಲಿ ಹುತಾಥ್ಮರಾದ ಎಲ್ಲಾ ಸೇನಾಧಿಕಾರಿಗಳ ಆತ್ಮಕ್ಕೆ ಶಾಂತಿಯನ್ನು ಕೋರಿ, ಮೃತರ ಕುಟುಂಬದವರಿಗೆ ಈ ದುಖಃವನ್ನು ಸಹಿಸುವ ಶಕ್ತಿಯನ್ನು ಭಗವಂತನು ನೀಡಲಿ ಎಂದು ಪ್ರಾರ್ಥಿಸಿದರು.
ಕಾರ್ಯಕ್ರಮದಲ್ಲಿ ದೀಪ ಬೆಳಗುವುದು ಮೂಲಕ ಮೃತರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ಮಾಡಿ ಶೃದ್ದಾಂಜಲಿ ಅರ್ಪಿಸಲಾಯಿತು.
ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಮಮತಾದೇವಿ, ನಾಮಧಾರಿ ಗುರುಮಠದ ಅಧ್ಯಕ್ಷರಾದ ಕೃಷ್ಣಾ ನಾಯ್ಕ, ಅರ್ಭನ್ ಬ್ಯಾಂಕಿನ ನಿರ್ದೆಶಕರಾದ ಶ್ರೀಧರ ನಾಯ್ಕ, ಹಿರಿಯ ಮಾಜಿ ಸೈನಿಕರಾದ ರಾಮಾ ನಾಯ್ಕ, ಪ್ರಮುಖರಾದ ಅರ್ಚನಾ ನಾಯ್ಕ, ದಿನೇಶ ನಾಯ್ಕ, ನಜೀರ್ ಕಾಶೀಂ, ಮಾಜಿ ಸೈನಿಕರ ಸಂಘದ ಸದಸ್ಯರು, ಪೊಲೀಸ್ ಅಧಿಕಾರಿಗಳು, ನಾಗರಿಕರು ಉಪಸ್ಥಿತರಿದ್ದರು. ತಾಲೂಕು ಮಾಜಿ ಸೈನಿಕರ ಸಂಘದ ಕಾರ್ಯದರ್ಶಿ ಶ್ರೀಕಾಂತ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.