ಹೊನ್ನಾವರ: ಹೆಚ್‍ಐವಿ ಬಗ್ಗೆ ಸರಿಯಾದ ಮಾಹಿತಿ ಸಮಾಜಕ್ಕೆ ಪರಿಣಾಮಕಾರಿಯಾಗಿ ತಲುಪಿಸಬೇಕಿದೆ ಎಂದು ಡಾ.ಉಷಾ ಹಾಸ್ಯಗಾರ ಹೇಳಿದರು.
ವಿಶ್ವ ಏಡ್ಸ್ ದಿನಾಚರಣೆ ಪ್ರತಿ ವರ್ಷ ಡಿಸೆಂಬರಿನಲ್ಲಿ ಆಚರಿಸಲಾಗುತ್ತಿದೆ. ಸಮಾಜದಲ್ಲಿ ಹೆಚ್.ಐ.ವಿ ಬಗ್ಗೆ ಸರಿಯಾದ ಅರಿವು ಮೂಡಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಪ್ರತಿಯೋರ್ವ ಸಿಬ್ಬಂಧಿಗಳು ಪರಸ್ಪರ ಸಹಕಾರದಲ್ಲಿ ಕಾರ್ಯನಿರ್ವಹಿಸಬೇಕು. ಸರಕಾರವು ಹೆಚ್.ಐ,ವಿ ಸೊಂಕಿತರ ಶ್ರೇಯೋಭಿವೃದ್ದಿಗಾಗಿ ಹಲವಾರು ಕಾರ್ಯಕ್ರಮಗಳನ್ನು ವಿವಿಧ ಇಲಾಖೆಗಳ ಮೂಲಕ ಜಾರಿಗೆ ತಂದಿದೆ.ಇದರ ಬಗ್ಗೆ ಸವಿಸ್ತಾರ ಮಾಹಿತಿ ಪಡೆದುಕೊಂಡು ಹೆಚ್.ಐ.ವಿ ಸೊಂಕಿತರಿಗೆ ತಲುಪಿಸವ ಕಾರ್ಯವಾಗಬೇಕಿದೆ. ಏ.ಆರ್.ಟಿ ಚಿಕಿತ್ಸೆ ಪಡೆದುಕೊಳ್ಳುವ ಮೂಲಕ ಹೆಚ್.ಐ.ವಿ ಸೊಂಕಿತರು ಜನಸಾಮನ್ಯರಂತೆ ಬದುಕಬಹುದಾಗಿದೆ.ಈ ಚಿಕಿತ್ಸೆ ಸರಕಾರಿ ಆರೋಗ್ಯ ವ್ಯವಸ್ಥೆಯಲ್ಲಿ ಉಚಿತವಾಗಿದೆ. 2030 ರ ವೇಳೆಗೆ ಹೆಚ್.ಐ.ವಿ ಮುಕ್ತ ರಾಷ್ಟ್ರ ಮಾಡುವ ಗುರಿ ತಲುಪಲು ಈಗಿನಿಂದಲೇ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕಿದೆ ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ|| ಉಷಾ ಹಾಸ್ಯಗಾರ ಹೇಳಿದರು.
ಅವರು ತಾಲೂಕಾ ಆಸ್ಪತ್ರೆ ಹೊನ್ನಾವರದಲ್ಲಿ ಕರ್ನಾಟಕ ಏಡ್ಸ್ ಪ್ರಿವೆನ್ಸ ಸೊಸೈಟಿ ಬೆಂಗಳೂರು, ಜಿಲ್ಲಾ ಆರೋಗ್ಯ ಮತ್ತು ಕು.ಕ ಇಲಾಖೆ ಕಾರವಾರ, ಮತ್ತು ಐ.ಸಿ.ಟಿ.ಸಿ ಕೇಂದ್ರ, ಆರೋಗ್ಯ ಇಲಾಖೆ ಹೊನ್ನಾವರ ಇವುಗಳ ಸಂಯುಕ್ತಾಶ್ರಯದಲ್ಲಿ ನಡೆದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರಾಸ್ತವಿಕ ಮಾತುಗಳನ್ನಾಡಿದ್ದರು. ಆಸ್ಪತ್ರೆಯ ತಜ್ಞ ವೈದ್ಯರುಗಳಾದ ಡಾ|| ಪ್ರಕಾಶ್ ನಾಯ್ಕ ತಮ್ಮ ಉಪನ್ಯಾಸದಲ್ಲಿ ಪ್ರಸ್ತುತ ಜಗತ್ತಿನಲ್ಲಿ 37.3 ಮಿಲಿಯನ್ ಜನ ಹೆಚ್.ಐ.ವಿಯೊಂದಿಗೆ ಬದುಕುತ್ತಿದ್ದಾರೆ. ಹೆಚ್.ಐ.ವಿ ಮತ್ತು ಏಡ್ಸ್ ಎರಡು ಬೇರೆ ಬೇರೆ ಯಾಗಿದ್ದು ಹೆಚ್.ಐ.ವಿ ಸೊಂಕಿತರು ಏ.ಆರ್.ಟಿ ಚಿಕಿತ್ಸೆ ಪಡೆದುಕೊಳ್ಳುವ ಮೂಲಕ ಜನಸಾಮನ್ಯರಂತೆ ಜೀವನ ನಡೆಸಬಹುದು. ಆದರೆ ಏಡ್ಸ್ ಅನ್ನವುದು ಹೆಚ್.ಐ.ವಿ ಸೊಂಕಿತನಿಗೆ ಬರುವ ಹಲವಾರು ಖಾಯಿಲೆಗಳು ಕೂಟವಾಗಿದೆ. ಹೆಚ್.ಐ.ವಿ ಸೊಂಕಿತರು ಕಾಲ ಕಾಲಕ್ಕೆ ಸಿಡಿ4,ಮತ್ತು ವೈರಲ್ ಲೋಡ್ ಪರೀಕ್ಷೆ ಮಾಡಿಸಿಕೊಳ್ಳುವ ಮೂಲಕ ತಮ್ಮ ದೇಹದ ಆರೋಗ್ಯದ ಪರೀಶೀಲಿಸಿಕೊಳ್ಳುತ್ತಿರಬೇಕು ಎಂದು ಹೇಳಿದರು.
ಸ್ತ್ರೀ ರೋಗ ತಜ್ಞರಾದ ಡಾ|| ಕೃಷ್ಣಾ ಜಿ ರವರು ಹೆಚ್.ಐ.ವಿ ಮತ್ತು ಗರ್ಭೀಣಿ ಮಹಿಳೆ ಕುರಿತು ಮಾತನಾಡುತ್ತಾ ಗರ್ಭಿಣಿ ಮಹಿಳೆಗೆ ಹೆಚ್.ಐ.ವಿ ಇದ್ದರೆ ಮುಗುವಿಗೆ ಹೆಚ್.ಐ.ವಿ ಬರುವ ಸಾದ್ಯತೆ ಇರುತ್ತದೆ. ಸಕಾಲದಲ್ಲಿ ಗರ್ಭಿಣಿ ಮಹಿಳೆ ಏ.ಆರ್.ಟಿ ಚಿಕಿತ್ಸೆ ಪಡೆದುಕೊಂಡರೆ, ಕಾಲ ಕಾಲಕ್ಕೆ ವೈದ್ಯರು ಹೇಳಿದಂತೆ ಅನುಸರಣೆ ಮಾಡಿದರೆ ಮಗುವಿಗೆ ಹೆಚ್.ಐ.ವಿ ಬರುವ ತೊಂದರೆಯನ್ನು ಕಡಿಮೆ ಮಾಡಬಹುದು, ಇವತ್ತಿನ ದಿನಗಳಲ್ಲಿ ನಮ್ಮ ಆರೋಗ್ಯ ಸೇವೆಯಲ್ಲಿ ಸಿಗುತ್ತಿರುವ ಉತ್ತಮ ಚಿಕಿತ್ಸೆ ಕಾರಣದಿಂದ ಮಗುವಿಗೆ ಹೆಚ್.ಐ.ವಿ ಸೊಂಕು ಬರುವುದು ಕಡಿಮೆಯಾಗಿದೆ.ಯಾವುದೇ ಮಹಿಳೆ ಗರ್ಭಿಣಿ ಎಂದು ತಿಳಿದ ತಕ್ಷಣ ಹೆಚ್.ಐ.ವಿ ಪರೀಕ್ಷೆಗೆ ಒಳಗಾಗಬೇಕು. ಹೆಚ್.ಐ.ವಿ ಸೊಂಕು ಇದ್ದರೆ ತಕ್ಷಣ ಏ.ಆರ.ಟಿ ಚಿಕಿತ್ಸೆ ಪ್ರಾರಂಭಿಸಿದರೆ ಮಗುವಿಗೆ ಹೆಚ್.ಐ.ವಿ ಬರದಂತೆ ತಡೆಗಟ್ಟಬಹುದು.ಎಲ್ಲ ಗರ್ಭಿಣಿ ಮಹಿಳೆಯರು ಹೆಚ್.ಐ.ವಿ ಪರೀಕ್ಷೆಗೆ ಒಳಗಾಗುವಂತೆ ಪ್ರಯತ್ನಿಸಬೇಕು ಎಂದು ಹೇಳಿದರು. ಸಭೆಯ ಅಧ್ಯಕ್ಷತೆ ವಹಿಸಿದ ಆಡಳಿತಾಧಿಕಾರಿಗಳಾದ ಡಾ|| ರಾಜೇಶ ಕಿಣಿ ಮಾತನಾಡುತ್ತ ಕ್ಷೇತ್ರ ಆರೋಗ್ಯ ಕಾರ್ಯಕರ್ತರು ಜನಸಾಮನ್ಯರಿಗೆ ಹೆಚ್.ಐ.ವಿ ಬಗ್ಗೆ ಸರಿಯಾದ ಮಾಹಿತಿ ನೀಡಿ ಹೆಚ್.ಐ.ವಿ ಪರೀಕ್ಷೆ ಬರುವಂತೆ ಮಾಡಬೇಕು. ಮುಂಜಾಗ್ರತಾ ಕ್ರಮ ಅನುಸರಿಸಿದರೆ ಹೆಚ್.ಐ.ವಿ ಬರದಂತೆ ತಡೆಗಟ್ಟಬಹುದು ಎಂದು ಹೇಳಿದ್ದರು. ಕಾರ್ಯಕ್ರಮದಲ್ಲಿ ಆಸ್ಪತ್ರೆಯ ತಜ್ಞ ವೈದ್ಯರುಗಳಾದ ಡಾ|| ಶಿವಾನಂದ ಹೆಗಡೆ,ಡಾ|| ಮಹೇಶ ಶೆಟ್ಟಿ,ಡಾ|| ರಮೇಶ ಗೌಡ,ಡಾ|| ಅನುರಾಧ,ಡಾ|| ಗುರುದತ್ತ ಕುಲಕರ್ಣಿ,ಕಛೇರಿ ಅಧೀಕ್ಷಕರಾದ ಶಶಿಕಲಾ ನಾಯ್ಕ ಉಪಸ್ಥಿತರಿದ್ದರು. ಐ.ಸಿ.ಟಿ.ಸಿ ಆಪ್ತಸಮಾಲೋಚಕರಾದ ವಿನಾಯಕ ಪಟಗಾರ ಕಾರ್ಯಕ್ರಮ ನಿರೂಪಿಸಿದರು. ಪ್ರಯೋಗಶಾಲಾ ತಜ್ಞರಾದ ಉಮೇಶ ಕೆ ವಂದಿಸಿದರು. ಆರೋಗ್ಯ ನಿರೀಕ್ಷಕರಾದ ಆನಂದ ಶೇಟ್, ಆರೋಗ್ಯ ಮಿತ್ರ ವೆಂಕಟೇಶ ಸಹಕರಿಸಿದರು. ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಸಿಬ್ಬಂದಿ ವರ್ಗ,ಸಮುದಾಯ ಆರೋಗ್ಯ ಅಧಿಕಾರಿಗಳು ಸೇರಿದಂತೆ 70 ಕ್ಕೂ ಹೆಚ್ಚು ಜನ ಭಾಗವಹಿಸಿದರು.