ಶಿರಸಿ: ಚಲನಚಿತ್ರಗಳ ಅಬ್ಬರದಿಂದ ದೇಶಿಯ ಸಂಸ್ಕೃತಿ ಬಿಂಬಿಸುವ ನಾಟಕ, ಬಯಲಾಟ ಇತರ ಜಾನಪದ ಕಲೆಗಳು ಅಳಿವಿನಂಚಿಗೆ ತಲುಪುತ್ತಿವೆ ಎಂದು ಉದ್ಯಮಿ ಉಪೇಂದ್ರ ಪೈ ಹೇಳಿದರು.
ಅವರು ತಾಲೂಕಿನ ಚಿಂಚಳಿಕೆ ಗ್ರಾಮದಲ್ಲಿ ಶ್ರೀ ಅಶ್ವಥ್ ನಾರಾಯಣ ಮತ್ತು ಮಹಾಸತಿ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ನಾಟಕ “ಮರಳಿ ಮಿಂಚಿದ ಮುತೈದೆ” ಉದ್ಘಾಟಿಸಿ ಮಾತನಾಡಿದರು. ದೇಶದ ಸಂಸ್ಕೃತಿ, ಭಾಷೆ, ಆಚಾರ ವಿಚಾರಗಳನ್ನು ಬಿಂಬಿಸುವ ನಾಟಕಗಳು ಜನರಿಂದ ದೂರವಾಗುತ್ತಿವೆ. ಕೀಳುಮಟ್ಟದ ಸಂಸ್ಕೃತಿ ಬಿಂಬಿಸುವ ಧಾರಾವಾಹಿಗಳು ಹೆಚ್ಚು ಪ್ರಚಾರ ಪಡೆಯುತ್ತಿವೆ. ಸಂಸ್ಕೃತಿ ಮತ್ತು ಇತಿಹಾಸವನ್ನು ಬಿಂಬಿಸುವ ನಾಟಕ ಗಳು ಹೆಚ್ಚು ಪ್ರದರ್ಶನಗೊಳ್ಳಬೇಕು. ರಂಗಭೂಮಿ ಕಲಾವಿದರು ಅತುತ್ತಮ ನಾಟಕ ಪ್ರದರ್ಶನಕ್ಕೆ ಹೆಚ್ಚು ಆದ್ಯತೆ ನೀಡಬೇಕು. ನಾಟಕ ಸಮಾಜದ ಹುಳುಕುಗಳನ್ನು ಎತ್ತಿ ತೋರಿಸುವ ಕಲೆ. ಸಮಾಜದ ಸಂಬಂಧಗಳನ್ನು ಗಟ್ಟಿಗೊಳಿಸುವ ಸಾಮಥ್ರ್ಯ ನಾಟಕಗಳಿಗಿದೆ ಎಂದು ಹೇಳಿದರು.
ಸಮಾಜದಲ್ಲಿ ಕಲಾವಿದರಿಗೆ ಉತ್ತಮ ಸ್ಥಾನಮಾನಗಳು ಸಿಗಬೇಕು. ಕಲಾವಿದರು ಬದುಕು ಸಂಕಷ್ಟದಲ್ಲಿದ್ದರೂ ತಮ್ಮ ರಕ್ತಗತವಾದ ಕಲೆಯಿಂದ ಸಮಾಜದ ಸಂಕಷ್ಟಗಳನ್ನು ಮರೆಸಿ, ಮನರಂಜಿಸುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ಎಂ.ಪಿ. ಹೆಗಡೆ, ವಿನಾಯಕ ಭಟ್, ಎಮ್ ಆರ್ ಹೆಗಡೆ, ಮಧುಸೂದನ್ ಹೆಗಡೆ, ಅರುಣ್ ಗೌಡ, ಊರ ಪ್ರಮುಖರು ಇದ್ದರು.