ಶಿರಸಿ: ಕೇವಲ ಉದ್ಯೋಗವನ್ನಷ್ಟೆ ಗುರಿಯಾಗಿಸಿಕೊಂಡಿರುವ ಇಂದಿನ ವಿದ್ಯಾರ್ಥಿಗಳ ಅಭ್ಯಾಸವು ಕೇವಲ ಪದವಿಗಳಿಗೆ ಸೀಮಿತವಾಗದೆ ಇಂದಿನ ಸ್ಪರ್ಧಾತ್ಮಕ ಜಗತ್ತಿಗೆ ಕಾಲಿಡುವಂತಾಗಬೇಕು. ಆಗಲೇ ದೇಶದ ಉನ್ನತಿ ಸುಲಭವಾಗುತ್ತದೆ ಎಂದು ಬೆಂಗಳೂರಿನ ’ಸ್ವಯಂ’ ಸಂಸ್ಥೆಯ ಅಧ್ಯಕ್ಷ ಎಸ್. ಎಂ. ಹೆಗಡೆ ಗೌರಿಬಣಿಗೆ ಹೇಳಿದರು.
ಸ್ವರ್ಣವಲ್ಲೀ ಇನ್ಸ್ಟಿಟ್ಯೂಟ್ ಆಫ್ ಅಡ್ಮಿನಿಸ್ಟ್ರೇಷನ್ (ಸ್ವಯಂ) ಶಿರಸಿ-ಬೆಂಗಳೂರು ಹಾಗೂ ಎಂ ಇ ಎಸ್, ಎಂ. ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ, ಶಿರಸಿ ಇದರ ಐಕ್ಯುಏಸಿ (IQAC) ಮತ್ತು ಕರಿಯರ್ ಗೈಡೆನ್ಸ್ & ಪ್ಲೇಸ್ಮೆಂಟ್ ಸೆಲ್ ಅಡಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ನಾಗರಿಕ ಸೇವಾ ಸ್ಪರ್ಧಾತ್ಮಕ ಪರೀಕ್ಷೆಗಳ ’ಜಾಗೃತಿ ಅಭಿಯಾನ ಕಾರ್ಯಾಗಾರ’ವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
’ಸ್ವಯಂ’ ಸಂಸ್ಥೆಯು ಸ್ವರ್ಣವಲ್ಲೀ ಶ್ರೀಗಳ ದೂರದೃಷ್ಟಿಯೊಂದಿಗೆ 20 ವರ್ಷಗಳ ಹಿಂದೆಯೇ ಸ್ಥಾಪಿತವಾಗಿ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು ಕಳೆದ 4 ವರ್ಷಗಳಿಂದ ಶಿರಸಿಯಲ್ಲಿಯೂ ಕೂಡ ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗುವಂತೆ ರೂಪಿಸಲಾಗುತ್ತಿದೆ. ’ಸ್ವಯಂ’ ಶಿರಸಿ ಘಟಕವು ಜಿಲ್ಲೆಯಲ್ಲಿ ಮೊದಲ ಬಾರಿಗೆ, ವಿವಿಧ ಹುದ್ದೆಗಳಿಗಾಗಿ ಕೇಂದ್ರ ಸರ್ಕಾರದ ರಾಷ್ಟ್ರೀಯ ನೇಮಕಾತಿ ಸಂಸ್ಥೆ (ಎನ್.ಆರ್.ಎ) ಯಿಂದ ನಡೆಸಲಾಗುವ ಸಾಮಾನ್ಯ ಅರ್ಹತಾ ಪರೀಕ್ಷೆಗೂ ಕೂಡ ನುರಿತ ತಜ್ಞರಿಂದ ತರಬೇತಿ ನೀಡಲಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು.
ಇಂದಿನ ವಿದ್ಯಾರ್ಥಿಗಳಲ್ಲಿ ಪ್ರಶ್ನಿಸುವ ಮನೋಭಾವ ಕಡಿಮೆಯಾಗುತ್ತಿದೆ. ಈ ಮೂಲಕ ಉಪಯುಕ್ತ ಮಾಹಿತಿಗಳಿಂದ ವಂಚಿತರಾಗುತ್ತಿದ್ದಾರೆ. ಕಾರಣ ಪರಿಪೂರ್ಣತೆಯೊಂದಿಗಿನ ಅಧ್ಯಯನದಿಂದ ಮಾತ್ರವೇ ವಿದ್ಯಾರ್ಥಿ ಜೀವನದಲ್ಲಿ ಸಫಲತೆಯನ್ನ ಕಾಣಬಹುದಾಗಿದೆ. ಅವಕಾಶಗಳು ಹೇರಳವಾಗಿರುವ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯುವಜನತೆಯು ಅವಕಾಶ ವಂಚಿತರಾಗದೆ ಕೌಶಲಯುತ ಜ್ಞಾನವನ್ನು ಹೊಂದುವ ಮೂಲಕ ಉತ್ತಮ ಜೀವನ ರೂಪಿಸಿಕೊಳ್ಳಬಹುದು. ವಿದ್ಯಾರ್ಥಿಗಳು ಅಕ್ಷರ ಪ್ರೀತಿಯನ್ನು ಹೊಂದುವುದರ ಜೊತೆಗೆ ಪುಸ್ತಕ ಪ್ರೀತಿಯನ್ನು ಬೆಳೆಸಿಕೊಂಡು ಸಮಯದ ಸಂಪೂರ್ಣ ಸದುಪಯೋಗ ಪಡೆದುಕೊಳ್ಳಬೇಕು, ಆಗ ಮಾತ್ರ ಯಶಸ್ಸು ಸಾಧ್ಯ. ಸ್ವಯಂ ಸಂಸ್ಥೆಯು ಹಲವಾರು ವಿದ್ಯಾರ್ಥಿಗಳನ್ನು ಕೇಂದ್ರ ಮತ್ತು ರಾಜ್ಯ ನಾಗರೀಕ ಸೇವಾ ಹುದ್ದೆಗಳಿಗೆ ಅರ್ಹರನ್ನಾಗಿಸುವ ನಿಟ್ಟಿನಲ್ಲಿ ಸಾಗಿದ್ದು, ಅತೀ ಕಡಿಮೆ ಖರ್ಚಿನಲ್ಲಿ ನೀಡಲಾಗುವ ಈ ತರಬೇತಿಯ ಉಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು. ಭಾರತೀಯ ಆಡಳಿತಾತ್ಮಕ ಸೇವಾ ಪರೀಕ್ಷೆಯಲ್ಲಿ ಆಯ್ಕೆಗೊಂಡು ದೇಶದ ವಿವಿಧೆಡೆಯಲ್ಲಿ ಅಧಿಕಾರಿಗಳಾಗಿ ನಿಯುಕ್ತಿಗೊಂಡ ಕೆಲವು ಸ್ಥಳೀಯ ಮಹನೀಯರು ಸ್ವಯಂ-ಶಿರಸಿಯ ಮೆಂಟರ್ ಆಗಿ ಕೆಲವು ತರಗತಿಗಳನ್ನೂ ತೆಗೆದುಕೊಳ್ಳುತ್ತಾ ಸಕಾಲದಲ್ಲಿ ಅಗತ್ಯ ಮಾರ್ಗದರ್ಶನವನ್ನೂ ನೀಡಲಿದ್ದಾರೆ ಎಂದರು.
’ಸ್ವಯಂ’ ಸಂಸ್ಥೆಯ ಶಿರಸಿ ಘಟಕದ ಅಧ್ಯಕ್ಷ ಆರ್. ಎಸ್. ಹೆಗಡೆ ಮಾತನಾಡಿ ಪ್ರತಿಭೆಗಳು ಯಾರಿಗೂ ಸೀಮಿತವಾದುದಲ್ಲ. ಛಲ ಮತ್ತು ದೃಢ ಮನಸ್ಸನ್ನ ಹೊಂದಿರುವ ಯಾರಾದರೂ ಸಾಧನೆಯ ಹಾದಿಯಲ್ಲಿ ಸಾಗಬಹುದು. ಇತರರಿಗಿಂತ ವಿಭಿನ್ನವಾದ ವಿಚಾರಧಾರೆಯನ್ನು ಹೊಂದುವ ಮೂಲಕ ಹಾಗೇ ಕಠಿಣ ಪರಿಶ್ರಮದಿಂದ ವಿಶೇಷ ಸಾಧನೆಗೈಯಬಹುದು ಎನ್ನುತ್ತಾ, ಅನೇಕ ಯಶಸ್ವೀ ಅಭ್ಯರ್ಥಿಗಳ ನೈಜ ಘಟನೆಗಳನ್ನು ಪ್ರಸ್ತಾಪಿಸುತ್ತಾ ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬಿದರು.
ಕಾಲೇಜಿನ ಪ್ರಾಚಾರ್ಯೆ ಡಾ. ಕೋಮಲಾ ಭಟ್ ಮಾತನಾಡಿ ಪ್ರತಿಯೊಬ್ಬರೂ ಕಡಿಮೆ ಖರ್ಚಿನಲ್ಲಿ ನೀಡಲಾಗುವ ಈ ಸೇವೆಯನ್ನು ಯಶಸ್ವಿಯಾಗಿ ಪಡೆದುಕೊಳ್ಳಿ. ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಸ್ವಯಂ ಸಂಸ್ಥೆಯಿಂತ ತರಬೇತಿ ಹೊಂದಿ ದೇಶದ ಅತ್ಯುನ್ನತ ಹುದ್ದೆಗಳನ್ನಲಂಕರಿಸಿದರೆ ಕಾಲೇಜಿಗೆ ಹೆಮ್ಮೆ ತಂದಂತೆ. ನೀವು ಮಾಡುವ ಉತ್ತಮ ಆಯ್ಕೆಗಳು ನಿಮ್ಮನ್ನ ಉತ್ತಮ ಹಾದಿಯತ್ತ ಕೊಂಡೊಯ್ಯಲಿವೆ. ಎಂದರು.
ಮೊಟೆನ್ಸರ್ ಸಭಾಭವನದಲ್ಲಿ ನೆಡೆದ ಕಾರ್ಯಾಗಾರದಲ್ಲಿ ಕಾಲೇಜಿನ ಪ್ರೊ.ಎಂ. ಪಿ. ಭಟ್. ಸ್ವಾಗತಿಸಿದರು. ಡಾ. ಗಣೇಶ ಎಸ್. ಹೆಗಡೆ ನಿರ್ವಹಿಸಿ, ವಂದಿಸಿದರು