ಶಿರಸಿ: ದೀಪಾವಳಿಯ ದಿನದಂದು ಪೂಜೆಗೆಂದು ಕಟ್ಟಿದ್ದ ಬಂಗಾರದ ಸರವನ್ನು ಆಕಳು ತಿಂದು ಬಿಟ್ಟಿತ್ತು. ಇದನ್ನು ಯಶಸ್ವಿಯಾಗಿ ಪತ್ತೆ ಹಚ್ಚಿದ ಪ್ರಸಿದ್ಧ ಪಶು ವಿಜ್ಞಾನಿ ಡಾ. ಪಿ.ಎಸ್.ಹೆಗಡೆ ಅವರ ತಂಡ ಶಸ್ತ್ರ ಚಿಕಿತ್ಸೆ ಮೂಲಕ ಹೊರಗೆ ತೆಗೆದ ಘಟನೆ ತಾಲೂಕಿನ ಹೀಪನಳ್ಳಿಯ ಸಂಕದ ಮನೆಯಲ್ಲಿ ವರದಿಯಾಗಿದೆ.
ಕಳೆದ ದೀಪಾವಳಿಗೆ ಆಕಳಿಗೆ ಕಟ್ಟಲಾಗಿದ್ದ ಬಂಗಾರದ ಲಕ್ಷ್ಮೀ ಸರವನ್ನು ಆಕಳು ನುಂಗಿತ್ತು. ಮಾಲಕ ಶ್ರೀಕಾಂತ ಹೆಗಡೆ ಅವರಿಗೆ ತಿಂದದ್ದು ಆಕಳೋ, ಕರುವೋ ತಿಳಿದಿರಲಿಲ್ಲ. ದಿನವೂ ಸಗಣಿಯಲ್ಲಿ ಹುಡುಕಿದರೂ ಸಿಕ್ಕಿರಲಿಲ್ಲ. ತಿಂಗಳ ಬಳಿಕ ಸಮರ್ಪಣಾ ಪಶುವೈದ್ಯರನ್ನು ಸಂಪರ್ಕಿಸಿದರು.
ಡಾ. ಪಿ.ಎಸ್ ಹೆಗಡೆಯವರು ಲೋಹ ಶೋಧಕದೊಂದಿಗೆ ಬಂದು, ತಿಂದಿದ್ದು ಹಸುವೇ ಎಂದು ಖಚಿತಪಡಿಸಿಕೊಂಡು ಉಮ್ಮಚಗಿಯ ಶಸ್ತ್ರಚಿಕಿತ್ಸಕ ಪಶು ವೈದ್ಯ ಡಾ. ರಾಜೇಶ ಅವರೊಂದಿಗೆ ಹೋಗಿ ಶಸ್ತ್ರಚಿಕಿತ್ಸೆಯ ಮೂಲಕ ಸರವನ್ನು ಹೊರತೆಗೆದರು.
ಎರಡು ಘಂಟೆಗಳ ಶಸ್ತ್ರಚಿಕಿತ್ಸೆಗೆ ರಘುಪತಿ ಭಟ್ಟ ಗಡಿಗೆಹೊಳೆ ಹಾಗೂ ಉಮ್ಮಚಗಿಯ ಮಣಿ ಮತ್ತು ಶ್ರೀಧರ ಸಹಕಾರ ನೀಡಿದರು. ಸರದ ಜೊತೆಗೆ ಒಂದು ತಾಳಿ ಕರುವಿನ ಹೊಟ್ಟೆ ಸೇರಿದ್ದು ಅದನ್ನು ಪಶುವೈದ್ಯರು ಪತ್ತೆ ಹಚ್ಚಿದ್ದಾರೆ. 5 ವರ್ಷದ ಹಿಂದೆ ನೆಬ್ಬೂರಿನಲ್ಲಿಯೂ ಇಂತಹ ಘಟನೆ ಸಂಭವಿಸಿದ್ದು ಗೋಪೂಜೆಯ ದಿನ ಬಂಗಾರವನ್ನು ಆದಷ್ಟು ಎಚ್ಚರಿಕೆಯಿಂದ ಉಪಯೋಗಿಸುವಂತೆ ಡಾ. ಪಿ ಎಸ್.ಹೆಗಡೆ ವಿನಂತಿಸಿದ್ದಾರೆ.