ಯಲ್ಲಾಪುರ: ಇತ್ತೀಚೆಗೆ ನಿಧನರಾದ ವಿದ್ವಾಂಸ ಡಾ.ಕೆ.ಎಸ್.ನಾರಾಯಣಾಚಾರ್ಯ ಹಾಗೂ ಹರಿದಾಸ ನೆವಣೆ ಗಣೇಶ ಭಟ್ಟ ಅವರು ಸಮಾಜಕ್ಕೆ ಹೊಸ ಬೆಳಕನ್ನು ನೀಡಿದ್ದಾರೆ ಎಂದು ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಹೇಳಿದರು.
ಅವರು ಪಟ್ಟಣದ ನಾಯಕನಕೆರೆ ಶ್ರೀಶಾರದಾಂಬಾ ಸಭಾಭವನದಲ್ಲಿ ಅಖಿಲ ಕರ್ನಾಟಕ ತ್ರಿಮತಸ್ಥ ಬ್ರಾಹ್ಮಣ ಅರ್ಚಕರ ಪರಿಷತ್ ವತಿಯಿಂದ ಡಾ.ಕೆ.ಎಸ್.ನಾರಾಯಣಾಚಾರ್ಯ, ನೆವಣೆ ಗಣೇಶ ಭಟ್ಟರ ಕುರಿತು ಹಮ್ಮಿಕೊಂಡಿದ್ದ ನುಡಿ-ಗಾನ-ನಮನ ಕಾರ್ಯಕ್ರಮದಲ್ಲಿ ನುಡಿ ನಮನ ಸಲ್ಲಿಸಿದರು.
ಇಡಗುಂದಿಯ ಸ್ನೇಹಸಾಗರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್.ಎಲ್. ಭಟ್ ಮಾತನಾಡಿ, ಸಮಾಜದ ಒಳಿತಿಗೆ, ಧರ್ಮದ ಒಳಿತಿಗೆ ನಾರಾಯಣಾಚಾರ್ಯ ಅವರ ಕೊಡುಗೆ ಅಪಾರವಾಗಿದೆ. ಭಾಷೆ, ಸಾಹಿತ್ಯಗಳಲ್ಲಿ ಪ್ರಬುದ್ಧತೆ ಹೊಂದಿದ್ದ ವಿದ್ವಾಂಸರಾದ ಅವರು ರಾಷ್ಟ್ರ ಭಕ್ತಿಯ ಜಾಗೃತಿ ಮೂಡಿಸಿದ್ದಾರೆ. ಗಣೇಶ ಭಟ್ಟ ಅವರ ಸಾತ್ವಿಕ, ಸರಳ ಜೀವನ ಎಲ್ಲರಿಗೂ ಮಾದರಿ ಎಂದರು.
ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನದ ಎಂ.ಸುಬ್ರಹ್ಮಣ್ಯ, ಡಿ.ಶಂಕರ ಭಟ್ಟ, ವೇ.ವಿಘ್ನೇಶ್ವರ ಭಟ್ಟ ಬಿಸಗೋಡ, ವೇ.ಮಂಜುನಾಥ ಭಟ್ಟ ಭಟ್ರಕೇರಿ, ಮಹಾಬಲೇಶ್ವರ ಭಟ್ಟ ಶೀಗೆಪಾಲ ನುಡಿನಮನ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವೇ.ನಾರಾಯಣ ಭಟ್ಟ ಮೊಟ್ಟೇಪಾಲ, ವಿ.ಗಣಪತಿ ಭಟ್ಟ ಮೊಟ್ಟೆಗದ್ದೆ, ವೇ.ರಾಮಕೃಷ್ಣ ಭಟ್ಟ ಕೆಳಗಿನಪಾಲ್, ಮಹಾಬಲೇಶ್ವರ ಹೆಗಡೆ ನೆರ್ಲೆಮನೆ, ನಾರಾಯಣ ಭಟ್ಟ ಕೊಣೇಮನೆ, ವಿಶ್ವೇಶ್ವರ ಭಟ್ಟ ಗೇರಕೊಂಬೆ, ಸುಬ್ರಾಯ ಭಟ್ಟ ಗುಂಡ್ಕಲ್ ಅವರನ್ನು ಗೌರವಿಸಲಾಯಿತು. ವೇ.ಲಕ್ಷ್ಮೀನಾರಾಯಣ ಗುಮ್ಮಾನಿ ಸ್ವಾಗತಿಸಿದರು. ಗಣಪತಿ ಭಟ್ಟ ನಿರ್ವಹಿಸಿದರು.
ವಿ.ಗಣಪತಿ ಭಟ್ಟ ಮೊಟ್ಟೆಗದ್ದೆ, ನರಸಿಂಹ ಭಟ್ಟ ಹಂಡ್ರಮನೆ, ಗಣೇಶ ಹೆಗಡೆ ನೆರ್ಲೆಮನೆ, ಪ್ರದೀಪ ಕೋಟೆಮನೆ, ಸತೀಶ ಹೆಗ್ಗಾರ ಗಾನ ನಮನ ಸಲ್ಲಿಸಿದರು.