ಕಾರವಾರ: ನಗರಸಭೆ ಪೌರಾಯುಕ್ತರ ಹಸ್ತಾಕ್ಷರವನ್ನು ಪರಿಸರ ಎಂಜಿನಿಯರೊಬ್ಬ ಸಾರ್ವಜನಿಕ ಅರ್ಜಿಗಳಿಗೆ ದುರ್ಬಳಕೆ ಮಾಡಿದ ಘಟನೆ ನಡೆದಿದ್ದು ಈ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಅವರು ಜಿಲ್ಲಾಧಿಕಾರಿ ಮುಲೈ ಮುಗಿಲನ್ ಅವರಿಗೆ ದೂರು ಸಲ್ಲಿಸಿದ್ದಾರೆ.
ಕಾರವಾರ ನಗರಸಭೆಯಲ್ಲಿ ಅವ್ಯವಹಾರ ನಡೆಯುತ್ತಿದೆ ಎಂದು ಅನುಮಾನ ವ್ಯಕ್ತವಾದ ಬಳಿಕ ಮಾಹಿತಿ ಹಕ್ಕಿನ ಅಡಿಯಲ್ಲಿ ಕೆಲವು ದಾಖಲೆಗಳನ್ನು ಕೇಳಲಾಗಿತ್ತು. ಅದರಂತೆ ನಗರಸಭೆಯಿಂದ ಮಾಹಿತಿ ಹಕ್ಕಿನಡಿ ಅವರು ಕೇಳಿದ ದಾಖಲೆಗಳನ್ನು ಒದಗಿಸಲಾಗಿದೆ. ಆದರೆ ಈ ವೇಳೆ ಪೌರಾಯುಕ್ತರ ಹೆಸರು ದುರ್ಬಳಕೆಯಾಗಿರುವುದು ಕಂಡು ಬಂದಿದೆ.
ನಗರಸಭೆಗೆ ಸಾರ್ವಜನಿಕರು ನೀಡಿದ್ದ ಅರ್ಜಿಗಳಿಗೆ ಪೌರಾಯುಕ್ತರ ಸಹಿ ಎಂಬ ಜಾಗದಲ್ಲಿ ಪರಿಸರ ಎಂಜಿನಿಯರ್ ಮಲ್ಲಿಕಾರ್ಜುನ ಅವರು ತಮ್ಮ ಸಹಿ ಮಾಡಿ ಸಾರ್ವಜನಿಕರಿಗೆ ಹಿಂಬರಹ ನೀಡಿರುವುದು ಮಾಹಿತಿ ಹಕ್ಕಿನಲ್ಲಿ ಪಡೆದ ದಾಖಲೆಗಳಿಂದಾಗಿ ಬೆಳಕಿಗೆ ಬಂದಿದೆ. ಪೌರಾಯುಕ್ತ ಆರ್. ಪಿ. ನಾಯ್ಕ ಅವರು ನಗರಸಭೆಯಲ್ಲಿ ಇದ್ದಾಗಲೇ ಪರಿಸರ ಅಭಿಯಂತರ ಮಲ್ಲಿಕಾರ್ಜುನ ಸಹಿ ಮಾಡಿದ್ದಾರೆ ಎಂದು ಮಾಧವ ನಾಯಕ ಆರೋಪಿಸಿದ್ದಾರೆ.
ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ. ಪೌರಾಯುಕ್ತ ಆರ್. ಪಿ. ನಾಯ್ಕ ಅವರು ಈ ಬಗ್ಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ಕಾನೂನು ಬಾಹಿರವಾಗಿ ಸಹಿ ಮಾಡಿದ್ದಾರೆ. ಮುಂದೆ ಈ ರೀತಿ ನಡೆಯಬಾರದು ತಪ್ಪಿತಸ್ಥರ ವಿರುದ್ಧ ಪೊಲೀಸ್ ದೂರು ದಾಖಲಿಸಬೇಕು ಹಾಗೂ ಜಿಲ್ಲಾಡಳಿತ ಈ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಮಾಧವ ನಾಯಕ ಆಗ್ರಹಿಸಿದ್ದಾರೆ.