ಶಿರಸಿ: ವಿಕೇಂದ್ರೀಕರಣ ವ್ಯವಸ್ಥೆಯನ್ನು ಹಂತ ಹಂತವಾಗಿ ಶಿಥಿಲಗೊಳಿಸಿದ ಕಾಂಗ್ರೆಸ್ ಗೆ ಈ ಕುರಿತು ಪ್ರಶ್ನೆ ಮಾಡಲು ಯಾವ ನೈತಿಕತೆ ಉಳಿದಿದೆ ಎಂದು ಪಂಚಾಯತರಾಜ್ ಇಲಾಖೆ ಉಪಾಧ್ಯಕ್ಷ ಪ್ರಮೋದ ಹೆಗಡೆ ದೂರಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.ಪರಿಷತ್ ಚುನಾವಣೆ ಪ್ರಚಾರದಲ್ಲಿ ವಿಕೇಂದ್ರೀಕರಣ ವ್ಯವಸ್ಥೆ ಮೇಲೆ ನಂಬಿಕೆ ಇರದ ಬಿಜೆಪಿಗೆ ಮತ ನೀಡಬಾರದು ಎಂದು ವಾಗ್ದಾಳಿ ನಡೆಸುತ್ತಿರುವ ಕಾಂಗ್ರೆಸ್ ಗೆ ತಿರುಗೇಟು ನೀಡಿದ ಹೆಗಡೆ ವಿಕೇಂದ್ರೀಕರಣ ವ್ಯವಸ್ಥೆಯನ್ನು ಹಾಳುಮಾಡಿದ ಕೀರ್ತಿ ಕಾಂಗ್ರೆಸ್ ಗೆ ಸಲ್ಲುತ್ತದೆ ಎಂದರು.
1983ರ ಅಮೆಂಡ್ ಮೆಂಟ್ ಸ್ಥಾನಿಕ ಸಂಸ್ಥೆಗಳಿಗೆ ಸಚಿವಾಲಯದ ಸ್ಥಾನಮಾನ ನೀಡಿತ್ತು. ಅವುಗಳಿಗೆ ತನ್ನ ವ್ಯಾಪ್ತಿಯ ಪ್ಲ್ಯಾನಿಂಗ್ ಅಧಿಕಾರ ಸಹಾ ಇತ್ತು. ಜಿಲ್ಲಾ ಪರಿಷತ್ ಪಡಿತರ, ಆರೋಗ್ಯ, ಸಹಕಾರಿ ವಲಯ ಸೇರಿದಂತೆ ಹಲವು ಕ್ಷೇತ್ರಗಳಿಗೆ ಸಂಬಂಧಿಸಿ ನಿಯಮಾವಳಿಗಳನ್ನು ರಚಿಸಿ ಜಾರಿಗೆ ತರಲು ಸ್ವಾಯತ್ತದೆ ಇತ್ತು. ಈ ಸ್ವಾತಂತ್ರ್ಯವನ್ನು 1993ರಲ್ಲಿ ಬದಲಾವಣೆ ತಂದು ಸಚಿವಾಲಯ ಎನ್ನುವ ಪ್ರಿಯಾಂಬಲ್ ಅನ್ನೇ ತೆಗೆದವರು ಯಾರು ಎಂದು ಪ್ರಶ್ನಿಸಿದರು.
ಇಂದು ಜಿ.ಪಂ. ಸದಸ್ಯರು ನಿರ್ಣಯಿಸಿದ ತೀರ್ಮಾನ ಕಾನೂನು ಬದ್ಧವಾಗಿಲ್ಲ ಎಂದು ಕಂಡುಬಂದಲ್ಲಿ ಅದನ್ನು ಗೌರ್ನಮೆಂಟ್ ಸೆಕರೇಟರಿ ಅವರಿಗೆ ಕಳುಹಿಸುವ ಅವಕಾಶ ನೀಡಿದ್ದು ಕಾಂಗ್ರೆಸ್. ಹೀಗಿರುವಾಗ ವಿಕೇಂದ್ರೀಕರಣ ವ್ಯವಸ್ಥೆ ಮೇಲೆ ಯಾರಿಗೆ ನಂಬಿಕೆ ಇದೆ, ಇಲ್ಲ ಎನ್ನುವುದು ಸ್ಪಷ್ಟವಾಗುತ್ತದೆ ಎಂದು ಪ್ರಮೋದ್ ಹೆಗಡೆ ಟೀಕಿಸಿದರು.
ವಿಕೇಂದ್ರೀಕರಣ ವ್ಯವಸ್ಥೆಯ ತಾ.ಪಂ, ಜಿ.ಪಂ ಗಳು ಪೋಸ್ಟ್ ಆಪೀಸ್ ನಂತೆ ಕಾರ್ಯನಿರ್ವಹಿಸುವಂತೆ ಮಾಡಿ ಕಾಂಗ್ರೆಸ್, ಮತ ಕೇಳುವಾಗ ಯಾವ ನೈತಿಕತೆ ಮೇಲೆ ವಿಕೇಂದ್ರೀಕರ ವ್ಯವಸ್ಥೆ ಮೇಲೆ ನಂಬಿಕೆ ಮಾತನಾಡುತ್ತಿದೆ ಎಂದು ಕುಟುಕಿದರು. ಜಿಲ್ಲಾ ಮತ್ತು ರಾಜ್ಯ ಸೆಕ್ಟರ್ ಎಂದು ವಿಂಗಡಿಸಿ ಶೇ 83 ರಷ್ಟು ಇಲಾಖೆಗಳು ಪಂಚಾಯತಕ್ಕೆ ಸಂಬಂಧವೇ ಇಲ್ಲ ಎನ್ನುವಂತೆ ಕೆಲಸ ಮಾಡುತ್ತಿವೆ ಇದೆಲ್ಲ ಕಾಂಗ್ರೆಸ್ ಆಡಳಿತಾವಧಿಯಲ್ಲೇ ನಡೆದಿದೆ ಎಂದು ತಿಳಿಸಿದರು.
ಅಂತ್ಯೋದಯ ಕಾರ್ಯಕ್ರಮದ ಮೂಲಕ ದೀನದಯಾಳ ಉಪಾಧ್ಯಾಯರು ಮೊದಲ ಬಾರಿಗೆ ವಿಕೇಂದ್ರಿಕರಣ ವ್ಯವಸ್ಥೆಗೆ ಕಾರಣರಾದರು. ನಂತರ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಗ್ರಾಮ ಸರ್ಕಾರ ಎನ್ನುವ ವಿಚಾರದೊಂದಿಗೆ 13 ಇಲಾಖೆಗಳನ್ನು ಗ್ರಾಮಪಂಚಾಯಿತಿ ವ್ಯಾಪ್ತಿಗೆ ತಂದು ಸ್ಥಾನಿಕ ಅತ್ಯತೆ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಸ್ವಾಯತ್ತತೆ ನೀಡಿದರು ಎಂದು ತಿಳಿಸಿದರು. ಬಿಜೆಪಿ ವಿಕೇಂದ್ರೀಕರಣದ ಪರ ಇದೆ. ಇದನ್ನು ಅರ್ಥ ಮಾಡಿಕೊಂಡ ಮತದಾರ ನಮ್ಮ ಅಭ್ಯರ್ಥಿಯನ್ನ ಬೆಂಬಲಿಸುವ ವಿಶ್ವಾಸ ಇದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಸದಾನಂದ ಭಟ್, ನರಸಿಂಹ ಬಕ್ಕಳ, ಡ್ಯಾನಿ ಡಿಸೋಜಾ ಇತರರು ಇದ್ದರು.