ಭಟ್ಕಳ: ನೂತನ ಎಸ್ಪಿ ಡಾ.ಸುಮನ್ ಪೆನ್ನೇಕರ್ ಭಟ್ಕಳ ಪೊಲೀಸ್ ಠಾಣೆ ಆಗಮಿಸಿ, ಪೊಲೀಸ್ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ಭಟ್ಕಳದಲ್ಲಿ ಕಾನೂನು ಸುವ್ಯವಸ್ಥೆಯ ಕುರಿತು ಪರಿಶೀಲನೆ ನಡೆಸಿದರು.
ನಗರದ ಡಿ.ಎಸ್.ಪಿ ಕಚೇರಿಯಲ್ಲಿ ಭಟ್ಕಳ ಡಿ.ಎಸ್ಪಿ ಕಚೇರಿಯ ವ್ಯಾಪ್ತಿಯಲ್ಲಿ ಬರುವ ಪಿಎಸ್.ಐ ಹಾಗೂ ಸಿ.ಪಿ.ಐಗಳ ಜೊತೆ ಸಭೆ ನಡೆಸಿದರು. ನಂತರ ನಗರದ ಮಾರುಕಟ್ಟೆ, ಚೆನ್ನಪಟ್ಟಣ ಹನುಮಂತ ದೇವಸ್ಥಾನ ರಸ್ತೆ, ಹಳೇಬಸ್ ನಿಲ್ದಾಣ ಮುಂತಾದ ಪ್ರದೇಶಗಳಿಗೆ ತಮ್ಮ ವಾಹನದಲ್ಲಿ ಸಂಚರಿಸಿ, ಸೂಕ್ಷ ಸ್ಥಳಗಳ ಕುರಿತು ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದರು.
ನಂತರ ಅವರು ಪತ್ರಕರ್ತರೊಂದಿಗೆ ಮಾತನಾಡಿ, ಭಟ್ಕಳದಲ್ಲಿ ಪತ್ರಕರ್ತ ಅರ್ಜುನ್ ಮಲ್ಯ ಅವರ ಮೇಲೆ ಹಲ್ಲೆಗೆ ಸಂಬಂಧಿಸಿದಂತೆ ಈಗಾಗಲೇ ಒಟ್ಟೂ ಮೂವರು ಆರೋಪಿಗಳನ್ನು ಬಂಧಿಸಿದ್ದೇವೆ. ಇನೋರ್ವ ಆರೋಪಿಯು ಅಡಗಿಕೊಂಡಿದ್ದು, ಆತನನ್ನೂ ಬಂಧಿಸಲಿದ್ದೇವೆ ಎಂದರಲ್ಲದೇ ಭಟ್ಕಳದಲ್ಲಿ ಗೋ ಕಳ್ಳತನ ಬಗ್ಗೆ ಮಾಹಿತಿ ಪಡೆದಿದ್ದು, ಕಟ್ಟುನಿಟ್ಟಿನ ಬಂದೋಬಸ್ತ್ ನಡೆಸಿ, ಗೋ ಕಳ್ಳತಕ್ಕೆ ಕೊನೆಗಾಣಿಸುತ್ತೇವೆ ಎಂದರು.
ಭಟ್ಕಳದಲ್ಲಿ ಮಂಗಳವಾರ ಗೋ ಕಳ್ಳರ ವಿರುದ್ಧ ಮಾಹಿತಿ ನೀಡಿದವರ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಶೀಘ್ರವಾಗಿ ಬಂದಿಸುತ್ತೇವೆ ಎಂದರು. ಈ ಸಂದರ್ಭದಲ್ಲಿ ಡಿ.ಎಸ್.ಪಿ. ಕೆ.ಯು.ಬೆಳ್ಳಿಯಪ್ಪ, ಸಿ.ಪಿ.ಐ. ದಿವಾಕರ, ಗ್ರಾಮಾಂತರ ಠಾಣಾ ಸಿ.ಪಿ.ಐ. ಮಹಾಬಲೇಶ್ವರ ಎನ್., ಪಿ.ಎಸ್.ಐ. ಸುಮಾ ಎಸ್ ಮತ್ತಿತರರು ಉಪಸ್ಥಿತರಿದ್ದರು.