ಅಂಕೋಲಾ: ನಮ್ಮ ಬದುಕಿನ ಸುಖ-ಶಾಂತಿ-ನೆಮ್ಮದಿ ಆರೋಗ್ಯದಲ್ಲಿಯೇ ಅಡಗಿದೆ. ಆರೋಗ್ಯವೊಂದಿದ್ದರೆ ಎಲ್ಲವೂ ನಮ್ಮೊಟ್ಟಿಗೆ ಇದ್ದಂತೆಯೇ, ಅದಕ್ಕಿಂತ ಮಿಗಿಲಾದ ಭಾಗ್ಯವಿಲ್ಲ ಎಂದು ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ರೆಸಿಡೆಂಟ್ ಮೆಡಿಕಲ್ ಆಫಿಸರ್ ಡಾ. ವೆಂಕಟೇಶ ಹೇಳಿದರು.
ಅವರು ಅಂಕೋಲಾದ ಅಚವೆ ಗ್ರಾ.ಪಂ ವ್ಯಾಪ್ತಿಯ ಚನಗಾರದಲ್ಲಿ ಲಾಯನ್ಸ್ ಕ್ಲಬ್ ಅಂಕೋಲಾ ಕರಾವಳಿ, ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಗ್ರಾಮ ಪಂಚಾಯಿತಿ ಅಚವೆ, ಸಾರ್ವಜನಿಕ ಗಣೇಶೋತ್ಸವ ಸಮಿತಿ, ಉಮಾ ದಂತ ಚಿಕಿತ್ಸಾಲಯ ಅಂಕೋಲಾ ಸಂಯುಕ್ತ ಆಶ್ರಯದಲ್ಲಿ ಚನಗಾರದಲ್ಲಿ ಏರ್ಪಡಿಸಿದ ಬೃಹತ್ ಆರೋಗ್ಯ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಾಮಾಜಿಕ ಕಾರ್ಯಕರ್ತ ಜಿ.ಎಂ.ಶೆಟ್ಟಿ ಮಾತನಾಡಿ, ಕೊರೊನಾ ಸಮಯದಲ್ಲಿ ಕಾರವಾರ ವೈದ್ಯಕೀಯ ಮಹಾವಿದ್ಯಾಲಯ ಸಲ್ಲಿಸಿದ ಸೇವೆ ಅಪೂರ್ವವಾದುದೆಂದರು. ದೂರದ ಕಾರವಾರದಿಂದ ವೈದ್ಯಕೀಯ ಮಹಾವಿದ್ಯಾಲಯದ ಹಿರಿಯ ವೈದ್ಯರು ಚನಗಾರದಂತಹ ಗ್ರಾಮೀಣ ಹಿಂದುಳಿದ ಪ್ರದೇಶಕ್ಕೆ ಬಂದು ಶಿಬಿರ ನಡೆಸುತ್ತಿರುವುದು ಶ್ಲಾಘನೀಯ ಕಾರ್ಯವೆಂದರು. ಇಂತಹ ಆರೋಗ್ಯ ಮೇಳವನ್ನು ಆಯೋಜಿಸಿದ್ದಕ್ಕೆ ಲಾಯನ್ಸ್ ಕ್ಲಬ್ ಅಂಕೋಲಾ ಕರಾವಳಿಯ ಪ್ರಯತ್ನವನ್ನು ಪ್ರಶಂಸಿದರು.
ಅಧ್ಯಕ್ಷತೆ ವಹಿಸಿದ ಲಾಯನ್ಸ್ ಅಧ್ಯಕ್ಷ ಡಾ. ಕರುಣಾಕರ ಇಲ್ಲಿ ಜನರ ಪ್ರೀತಿ, ವಿಶ್ವಾಸ ನಮ್ಮನ್ನು ಮೂಕವಿಸ್ಮಿತನಾಗಿಸಿದೆ. ನಮ್ಮ ಸೇವಾ ಕ್ಷೇತ್ರವನ್ನು ಚನಗಾರದಂತಹ ಗ್ರಾಮೀಣ ಭಾಗಕ್ಕೆ ವಿಸ್ತರಿಸಿದ್ದಕ್ಕೆ ನಮಗೆ ಹೆಮ್ಮೆ ಸಮಾಧಾನ ತಂದಿದೆ ಎಂದರು.
ಈ ಶಿಬಿರದಲ್ಲಿ 400 ಕ್ಕೂ ಹೆಚ್ಚು ಶಿಬಿರಾರ್ಥಿಗಳ ಆರೋಗ್ಯ ಪರೀಕ್ಷಿಸಿ ಸೂಕ್ತ ಸಲಹೆಗಳನ್ನು ನೀಡಲಾಯಿತು. ಮಧುಮೇಹ, ರಕ್ತತಪಾಸಣೆ, ರಕ್ತದೊತ್ತಡ, ಜ್ವರ ತಪಾಸಣೆ ಕೈಗೊಳ್ಳಲಾಯಿತು. ಎಲ್ಲ ಶಿಬಿರಾರ್ಥಿಗಳಿಗೆ ಉಚಿತ ಔಷಧ ಸಾಮಾಗ್ರಿಗಳನ್ನು ನೀಡಲಾಯಿತು. ಉಮಾ ದಂತ ಚಿಕಿತ್ಸಾಲಯದವರು ಎಲ್ಲರಿಗೆ ಬ್ರಶ್ ಟೂತ್‍ಪೇಸ್ಟ್‍ನ್ನು ನೀಡಿದರು. ಧಾರವಾಡದ ನಂದಿನಿ ಹಾಲು ಒಕ್ಕೂಟ ಎಲ್ಲರಿಗೆ ಮಜ್ಜಿಗೆ ವ್ಯವಸ್ಥೆಯನ್ನು ಮಾಡಿತ್ತು. ಸುಮಾರು 40 ಕ್ಕೂ ಹೆಚ್ಚು ತಜ್ಞ ವೈದ್ಯ ಹಾಗೂ ಸಿಬ್ಬಂದಿಗಳು ಈ ಶಿಬಿರದಲ್ಲಿ ಭಾಗವಹಿಸಿದ್ದರು. ಅಂಕೋಲಾ ವಿಶ್ವದರ್ಶನ ಶಾಲೆಯ ವಿದ್ಯಾರ್ಥಿನಿಯರು ಶಿಬಿರದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಮಂಜುನಾಥ ನಾಯಕ ನೀಡಿರುವ ಗಾಲಿ ಖುರ್ಚಿಯನ್ನು ವಿಕಲಚೇತನ ಮಗುವಿಗೆ ನೀಡಲಾಯಿತು.
ಹಸನ್ ಶೇಖ್ ಸ್ವಾಗತಿಸಿದರು. ಮಹಾಂತೇಶ ರೇವಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಲಾಯನ್ಸ್ ಕ್ಲಬಿನ ಇತಿಹಾಸ, ಗುರಿ, ಸಾಧನೆಗಳ ಪರಿಚಯ ಮಾಡಿಕೊಟ್ಟರು. ಶಿಕ್ಷಕ ಜಿ.ಆರ್.ತಾಂಡೇಲ್ ಕಾರ್ಯಕ್ರಮ ನಿರೂಪಿಸಿದರು. ಮಂಜುನಾಥ ನಾಯಕ ವಂದಿಸಿದರು.