ಕಾರವಾರ: ಗ್ರಾಮ ಪಂಚಾಯಿತಿಗಳಲ್ಲಿ ಚುನಾಯಿತರಾಗಿರುವ ಮಹಿಳಾ ಜನಪ್ರತಿನಿಧಿಗಳ ಪರವಾಗಿ ಪತಿಯವರಾಗಲಿ ಅಥವಾ ಅವರ ಕುಟುಂಬದ ಸದಸ್ಯರಾಗಲಿ ಗ್ರಾಮ ಪಂಚಾಯಿತಿಗಳ ಕಾರ್ಯನಿರ್ವಹಣೆ ಹಾಗೂ ತೆಗೆದುಕೊಳ್ಳುವ ನಿರ್ಧಾರಕ್ಕೆ ಸಂಬಂಧಿಸಿದಂತೆ ಹಸ್ತಕ್ಷೇಪ ನಡೆಸುವುದು ಕಾನೂನುಬಾಹಿರವಾಗಿದೆ ಎಂದು ಸಿಇಒ ಪ್ರಿಯಾಂಗಾ ಎಂ ಸುತ್ತೋಲೆ ಹೊರಡಿಸಿದ್ದಾರೆ.
ಗ್ರಾಮ ಪಂಚಾಯಿತಿಗಳಲ್ಲಿ ಚುನಾಯಿತರಾಗಿರುವ ಮಹಿಳಾ ಸದಸ್ಯರ ಪರವಾಗಿ ಅವರ ಪತಿ ಹಾಗೂ ಕುಟುಂಬಸ್ಥರು ಗ್ರಾಮ ಪಂಚಾಯತಿಗಳ ಕಾರ್ಯ ನಿರ್ವಹಣೆಯಲ್ಲಿ ಹಸ್ತಕ್ಷೇಪ ನಡೆಸುತ್ತಿರುವುದು ಸಾರ್ವಜನಿಕರಿಂದ ತಿಳಿದು ಬಂದಿದೆ. ಅಲ್ಲದೆ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರುಗಳ ಅನುಪಸ್ಥಿತಿಯಲ್ಲಿ ಅವರ ಪತಿ ಹಾಗೂ ಅವರ ಕುಟುಂಬದ ಸದಸ್ಯರು ಜಿಲ್ಲಾ ಪಂಚಾಯತ್ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿಯೂ ಸಹ ಅವರೇ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರುಗಳೆಂದು ತಿಳಿಸಿರುವುದನ್ನು ಸಹ ಗಮನಿಸಲಾಗಿದೆ. ಗ್ರಾಮ ಪಂಚಾಯಿತಿಗಳ ದೈನಂದಿನ ಕಾರ್ಯ ನಿರ್ವಹಣೆಯಲ್ಲಿ ಅಧಿಕೃತವಾಗಿ ಗ್ರಾಮ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗಿರುವ ಸದಸ್ಯರ ಸಂಬಂಧಿಕರು ಪಂಚಾಯಿತಿಗಳ ದೈನಂದಿನ ಕಾರ್ಯ ನಿರ್ವಹಣೆಯಲ್ಲಿ ಅಧಿಕೃತವಾಗಿ ಗ್ರಾಮ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗಿರುವ ಸದಸ್ಯರ ಸಂಬಂಧಿಕರು ಹಸ್ತಕ್ಷೇಪ ನಡೆಸಿದ ಸಂದರ್ಭದಲ್ಲಿ ಅಂತಹ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರುಗಳ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 43-ಎ ಮತ್ತು ಪ್ರಕರಣ 48(4) ರಡಿಯಲ್ಲಿ ಅನ್ವಯವಾಗುವ ನಿಯಮಗಳಂತೆ ಕ್ರಮ ಕೈಗೊಳ್ಳುಲಾಗುವುದು. ಅಂತಹ ಹಸ್ತಕ್ಷೇಪ ಪ್ರಕರಣಗಳು ಕಂಡುಬಂದಲ್ಲಿ ವಿಳಂಬಕ್ಕೆ ಆಸ್ಪದ ನೀಡದೆ ಸೂಕ್ತ ಶಿಫಾರಸ್ಸಿನೊಡನೆ ಪ್ರಸ್ತಾವನೆಯನ್ನು ಜಿಲ್ಲಾ ಪಂಚಾಯತ್ ಕಚೇರಿಗೆ ಸಲ್ಲಿಸಬೇಕೆಂದು ಜಿಲ್ಲೆಯ ಎಲ್ಲಾ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಪ್ರಿಯಾಂಗಾ ಎಂ. ಅವರು ಸುತ್ತೋಲೆ ಮೂಲಕ ತಿಳಿಸಿದ್ದಾರೆ.