ಶಿರಸಿ: ಸಂಹಿತಾ ಮ್ಯೂಸಿಕ್ ಫೋರಮ್ ಹನ್ನೆರಡನೇ ವರ್ಷದ ವಾರ್ಷಿಕ ವಿಶೇಷ ಸಂಗೀತ ಸಮ್ಮೇಳನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಟಿ.ಆರ್.ಸಿ ಸಭಾಭವನದಲ್ಲಿ ನಡೆಯಿತು. ಸಂಸ್ಥೆಯ ಅಧ್ಯಕ್ಷ ಸುಬ್ರಾಯ ಹೆಗಡೆ ಉದ್ಘಾಟಿಸಿದರು. ನಂತರ ವಿದ್ಯಾರ್ಥಿಗಳಿಂದ ಗಾಯನ ವಾದನ ಕಾರ್ಯಕ್ರಮ ನೆರವೇರಿತು. ಸಭಾ ಕಾರ್ಯಕ್ರಮದಲ್ಲಿ ವಕೀಲ ಜಿ ಎನ್ ಹೆಗಡೆ ಮುರೇಗಾರ ಅಧ್ಯಕ್ಷತೆ ವಹಿಸಿ, ಸಂಗೀತದ ಪ್ರಯೋಜನ ಎಲ್ಲರೂ ಪಡೆಯಬೇಕು ಎಂದರು.
ಉದ್ಯಮಿ ಕೆ ಬಿ ಲೋಕೇಶ, ಸಾಂಸ್ಕೃತಿಕ ಪರಿಸರದ ಬೆಳವಣಿಗೆಗೆ ಎಲ್ಲರೂ ಸಹಕರಿಸಲು ಕೋರಿದರು. ವೈದ್ಯ ಡಾ.ಯುವರಾಜ್ ಪಾಲ್ಗೊಂಡರು. ನಂತರ ಹೆಸರಾಂತ ಗಾಯಕಿ ವಿದುಷಿ ರೇಣುಕಾ ನಾಕೋಡ್ ಧಾರವಾಡ ತಮ್ಮ ಸುಮಧುರ ಗಾಯನದಲ್ಲಿ ರಾಗ ಪೂರಿಯಾ ಧನಾಶ್ರೀ,ಕಲಾವತಿ ಹಾಗೂ ದಾಸರ ಪದವನ್ನು ಪ್ರಸ್ತುತ ಪಡಿಸಿದರು.
ನಂತರ ನಾಡಿನ ಹೆಸರಾಂತ ಗಾಯಕ ಪಂಡಿತ ಗಣಪತಿ ಭಟ್ ಹಾಸಣಗಿ ತಮ್ಮ ಅದ್ಭುತ ಕಂಠದಲ್ಲಿ ರಾಗ ಧನಕೋನಿ ಕಲ್ಯಾಣ ಹಾಗೂ ವಚನವನ್ನು ಪ್ರಸ್ತುತ ಪಡಿಸಿ ಕೇಳುಗರ ಮನತಣಿಸಿದರು. ಇವರಿಗೆ ತಬಲಾದಲ್ಲಿ ಅಂತರಾಷ್ಟ್ರೀಯ ಖ್ಯಾತಿಯ ತಬಲಾ ವಾದಕ ಪಂ.ರಘುನಾಥ ನಾಕೋಡ್ ಧಾರವಾಡ ಹಾಗೂ ಸಂವಾದಿನಿಯಲ್ಲಿ ಭರತ್ ಹೆಗಡೆ ಹೆಬ್ಬಲಸು ಅತ್ಯುತ್ತಮ ಸಹಯೋಗ ನೀಡಿದರು. ತಾನಪುರಾದಲ್ಲಿ ವಿನಾಯಕ ಹೆಗಡೆ ಹಿರೇಹದ್ದ, ಸುನೀತಾ ಹಾಗೂ ತಾಳದಲ್ಲಿ ಅನಂತಮೂರ್ತಿ ಸಹಕರಿದರು.
ಸಂಸ್ಥೆಯ ಅಧ್ಯಕ್ಷ ಸುಬ್ರಾಯ ಹೆಗಡೆ, ನಿರ್ದೇಶಕರುಗಳಾದ ಗಿರೀಶ್ ಹೆಗಡೆ, ಗಣೇಶ ಖೂರ್ಸೆ ,ಅರವಿಂದ ಪೈ ಮುಂತಾದವರು ಉಪಸ್ಥಿತರಿದ್ದು ಕಾರ್ಯಕ್ರಮದ ವಿವಿಧ ಜವಾಬ್ದಾರಿ ನಿರ್ವಹಿಸಿದರು. ಡಾ.ಗಣೇಶ ಹೆಗಡೆ, ಅಶ್ವಿನಿ ಹೆಗಡೆ, ಕೃಷ್ಣಮೂರ್ತಿ ಕೆರೆಗದ್ದೆ, ಆಶಾ ಕೆರೆಗದ್ದೆ ನಿರೂಪಿಸಿದರು.