ಶಿರಸಿ: 1971 ರ ಬಾಂಗ್ಲಾ ವಿಮೋಚನಾ ಯುದ್ಧದಲ್ಲಿ ಭಾರತ ಗೆದ್ದು 50 ವರ್ಷ ಸಂದ ಹಿನ್ನಲೆಯಲ್ಲಿ ಕಾರವಾರದ INS ಕದಂಬದ ಸೈನಿಕರು ಹಮ್ಮಿಕೊಂಡಿದ್ದ ಸೈಕಲ್ ರ‍್ಯಾಲಿಯು ಸೋಮವಾರ ಶಿರಸಿ ನಗರಕ್ಕೆ ಆಗಮಿಸಿ, ಇಲ್ಲಿನ ಶ್ರೀ ಮಾರಿಕಾಂಬಾ ಶಾಲಾ ವಿದ್ಯಾರ್ಥಿಗಳೊಡನೆ ಸಂವಾದ ನಡೆಸಿದರು.
ನಗರದ ತೋಟಿಗರ ಕಲ್ಯಾಣ ಮಂಟಪದಲ್ಲಿ ಶಿರಸಿ-ಸಿದ್ದಾಪುರ-ಯಲ್ಲಾಪುರ-ಮುಂಡಗೋಡಿನ ಮಾಜಿ ಸೈನಿಕರ ಸಂಘವು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾರತೀಯ ಸೈನ್ಯದ ಮಾಜಿ ವಾಯುಸೇನಾಧಿಕಾರಿ, ಶಿರಸಿ ಡಿಎಸ್ಪಿ ರವಿ ನಾಯ್ಕ ಮಾತನಾಡಿ, 1971 ರ ಯುದ್ಧದಲ್ಲಿ ಭಾರತ ಗೆದ್ದು, 50 ವರ್ಷಗಳು ಸಂದಿವೆ. ನಮ್ಮ ಸೈನಿಕ ಶಕ್ತಿ ಎಷ್ಟು ಸಮರ್ಥವಾಗಿದೆ ಎಂಬುದನ್ನು ನಮ್ಮ ಇಂದಿನ ತಲೆಮಾರು ಅರ್ಥಮಾಡಿಕೊಳ್ಳಬೇಕು. ದೇಶಕ್ಕೆ ಸೇವೆಗೈಯ್ಯುವ ಅವಕಾಶ ಎಲ್ಲರಿಗೂ ದೊರೆಯಲಾರದು. ಅವಕಾಶ ದೊರೆತಾಗ ಭಾರತೀಯ ಸೈನ್ಯಕ್ಕೆ ಸೇರಲು ಉತ್ಸಾಹ ತೋರಬೇಕು ಎಂದರು.
ನಿವೃತ್ತ ವಿಂಗ್ ಕಮಾಂಡರ್ ಮುರಾರಿ ಭಟ್ಟ ಮಾತನಾಡಿ, ಭಾರತೀಯ ಸೈನ್ಯದಲ್ಲಿ ವಿದ್ಯಾರ್ಥಿನಿಯರಿಗೂ ಅವಕಾಶವಿದೆ. ಕೊರೆತಯಾಗಿರುವುದು ಪ್ರಯತ್ನ ಮಾತ್ರ. ಆ ನಿಟ್ಟಿನಲ್ಲಿ ನಮಗೆ ನಾವೇ ಪ್ರಯತ್ನ ನಡೆಸಬೇಕು ಎಂದರು.
1971 ರ ಬಾಂಗ್ಲಾ ವಿಮೋಚನಾ ಯುದ್ಧದ ಗೆಲುವಿಗೆ 50 ವರ್ಷ ಸಂದ ಹಿನ್ನಲೆಯಲ್ಲಿ ಸ್ವರ್ಣಿಮ್ ವಿಜಯ ವರ್ಷ ಹೆಸರಿನಲ್ಲಿ ಕಾರವಾರದ INS ಕದಂಬದ ಸೈನ್ಯಾಧಿಕಾರಿಗಳು ಹಮ್ಮಿಕೊಂಡಿದ್ದ ಸೈಕಲ್ ರ‌್ಯಾಲಿ ಕುರಿತು ಭಾರತೀಯ ನೌಕಾ ದಳದ ಲೆಪ್ಟಿನೆಂಟ್ ಕಮಾಂಡರ್ ಆಶೀಶ್ ಜಾಯಲ್ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಪೌರಾಯುಕ್ತ ಕೇಶವ ಚೌಗುಲೆ, ಮಾರಿಕಾಂಬಾ ಪದವಿಪೂರ್ವ ಕಾಲೇಜ್ ಪ್ರಾಚಾರ್ಯ ಬಾಲಚಂದ್ರ ಭಟ್, ಯುದ್ಧದಲ್ಲಿ ಭಾಗವಹಿಸಿದ್ದ ರವಿ ಕಾನೆಟ್ಕರ್, ಆರ್.ವಿ.ನಾಯ್ಕ, ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ವಿನಾಯಕ ಧೀರನ್, ಉಪಾಧ್ಯಕ್ಷ ಎಸ್.ಎಂ.ಹೆಗಡೆ, ಕಾರ್ಯದರ್ಶಿ ರಾಮು ಇದ್ದರು.