ಅಂಕೋಲಾ: ಪುರಸಭೆ ಕಟ್ಟಡದ ತರಕಾರಿ ಮಾರುಕಟ್ಟೆ ಪ್ರಾಂಗಣದಲ್ಲಿ ಅಂಗಡಿ ಪಡೆದು ವ್ಯಾಪಾರ ನಡೆಸುತ್ತಿರುವವರು, ಪಟ್ಟಣದ ಮುಖ್ಯ ರಸ್ತೆಯ ಬದಿಯಲ್ಲಿ ತರಕಾರಿ ವ್ಯಾಪಾರ ಮಾಡುತ್ತಿರುವುದನ್ನು ಖಂಡಿಸಿ ಕೆಲವು ವ್ಯಾಪಾರಿಗಳು ಪುರಸಭೆಯ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಗಣೇಶ ಚತುರ್ಥಿ ವೇಳೆಯಲ್ಲಿ ಹೆಚ್ಚು ಜನಜಂಗುಳಿ ಇರುತ್ತದೆಂದು ಹೊರಗೆ ಬೀದಿ ಬದಿಯಲ್ಲಿ ವ್ಯಾಪಾರ ಮಾಡಲು ಅಂಗಡಿಕಾರರಿಗೆ ತಾತ್ಕಾಲಿಕವಾಗಿ ಅನುಮತಿ ನೀಡಲಾಗಿತ್ತು. ಆದರೆ ಕೆಲವು ವ್ಯಾಪಾರಿಗಳು ಈಗಲೂ ತಮ್ಮ ಮೂಲ ಸ್ಥಳಗಳಲ್ಲಿಯೇ ಠಿಕಾಣಿ ಹೂಡಿ ವ್ಯಾಪಾರ ಶುರುವಿಟ್ಟುಕೊಂಡಿದ್ದರಿಂದ ಪುರಸಭೆಯ ಕಟ್ಟಡದೊಳಗಿರುವ ತರಕಾರಿ ವ್ಯಾಪಾರಿಗಳಿಗೆ ಗ್ರಾಹಕರಿಲ್ಲದೆ ಪರದಾಡುವಂತಾಗಿದೆ.
ಹೀಗಾಗಿ ಕಟ್ಟಡದೊಳಗಿನ ಅಂಗಡಿಕಾರರು ಸೋಮವಾರ ಪುರಸಭೆಯ ಮುಖ್ಯಾಧಿಕಾರಿಗಳಿಗೆ ಮನವಿ ನೀಡಿ ಅಂಗಡಿಗಳನ್ನು ಪಡೆದು ಹೊರಗಡೆ ವ್ಯಾಪಾರಿಗಳಿಗೆ ಒಳಗಡೆಯೇ ವ್ಯಾಪಾರ ನಡೆಸುವಂತೆ ಕ್ರಮ ಕೈಗೊಳ್ಳಬೇಕು ಅಥವಾ ತಮಗೂ ಅಧಿಕೃತವಾಗಿ ಹೊರಗಡೆ ವ್ಯಾಪಾರ ನಡೆಸಲು ಸ್ಥಳಾವಕಾಶ ನೀಡಬೇಕೆಂದು ಆಗ್ರಹಿಸಿದ್ದಾರೆ.
ಮನವಿ ಸ್ವೀಕರಿಸಿದ ಮುಖ್ಯಾಧಿಕಾರಿ ಶ್ರುತಿ ಗಾಯಕವಾಡ, ಪುರಸಭೆಯ ಆಡಳಿತ ಮಂಡಳಿಯೇ ಠರಾವು ಪಾಸು ಮಾಡಿ ಕಟ್ಟಡದೊಳಗಿನ ಅಂಗಡಿಕಾರರಿಗೆ ಅನುಮತಿ ನೀಡಿದ್ದಾರೆ. ಹೀಗಾಗಿ ನಾನು ಕ್ರಮ ಕೈಗೊಳ್ಳಲಾಗುವದಿಲ್ಲ ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ವ್ಯಾಪಾರಿಗಳಾದ ನಾಗೇಂದ್ರ ದೇವಾ ನಾಯ್ಕ, ಉದಯ ಬಿ ನಾಯ್ಕ, ಪ್ರಕಾಶ ಬಿ. ನಾಯ್ಕ, ಸಂತೋಷ ಎನ್. ನಾಯ್ಕ, ದಿನೇಶ ಅಂಕೋಲೆಕರ, ಮೊಹಮ್ಮದ ಗೌಸ್ ಇನ್ನಿತರರು ಉಪಸ್ಥಿತರಿದ್ದರು.