ನವದೆಹಲಿ: ಇಂದು ಭಾರತ ರತ್ನ ಡಾ ಬಿಆರ್ ಅಂಬೇಡ್ಕರ್ ಅವರ 65 ನೇ ಮಹಾಪರಿನಿರ್ವಾಣ ದಿವಸ. ಈ ಸಂದರ್ಭದಲ್ಲಿ ಆ ಮಹಾ ಚೇತನಕ್ಕೆ ರಾಷ್ಟ್ರ ಗೌರವ ಸಲ್ಲಿಸುತ್ತಿದೆ. ರಾಷ್ಟ್ರ ನಿರ್ಮಾಣದಲ್ಲಿ ಅಂಬೇಡ್ಕರ್ ಅವರ ಕೊಡುಗೆಯನ್ನು ಎತ್ತಿ ಹಿಡಿಯಲು ದೇಶದಾದ್ಯಂತ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.
ನವದೆಹಲಿಯ ಸಂಸತ್ ಭವನದ ಸಂಕೀರ್ಣದಲ್ಲಿರುವ ಅವರ ಪ್ರತಿಮೆಗೆ ಗಣ್ಯರು ಮತ್ತು ಸಂಸದರು ಸಂವಿಧಾನ ಶಿಲ್ಪಿಗೆ ನಮನ ಸಲ್ಲಿಸಲಿದ್ದಾರೆ.
ಈ ಸಂದರ್ಭವನ್ನು ಗುರುತಿಸಲು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಕಾರ್ಯಗಳನ್ನು ವಿವರಿಸುವ ಕಿರುಪುಸ್ತಕವನ್ನು ಮುಂಬೈ ಮೇಯರ್ ಕಿಶೋರಿ ಪೆಡ್ನೇಕರ್ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಡಾ.ಅಂಬೇಡ್ಕರ್ ಅವರ ಸ್ಮಾರಕ ಚೈತ್ಯಭೂಮಿ ಸ್ಫೂರ್ತಿಯ ಸ್ಥಳವಾಗಿದೆ, ಜೊತೆಗೆ ಅವರು ಇಡೀ ಮನುಕುಲಕ್ಕೆ ನೀಡಿದ ತ್ಯಾಗ ಮತ್ತು ಕೊಡುಗೆ ಯಾವಾಗಲೂ ಸ್ಫೂರ್ತಿಯ ಚಿಲುಮೆಯಾಗಿದೆ.
ದಾದರ್‍ನ ಚೈತ್ಯಭೂಮಿಯಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ದೂರದರ್ಶನದ ಸಹ್ಯಾದ್ರಿ ಚಾನೆಲ್‍ನಲ್ಲಿ ಮತ್ತು ಬೃಹನ್‍ಮುಂಬೈ ಮುನ್ಸಿಪಲ್ ಕಾಪೆರ್Çರೇಶನ್‍ನ ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ನೇರ ಪ್ರಸಾರ ಮಾಡಲಾಗುವುದು ಎಂದು ಅವರು ತಿಳಿಸಿದರು.
ಭಾರತೀಯ ಸಂವಿಧಾನದ ಪಿತಾಮಹ ಡಾ ಅಂಬೇಡ್ಕರ್ ಅವರು ನ್ಯಾಯಶಾಸ್ತ್ರಜ್ಞ, ಅರ್ಥಶಾಸ್ತ್ರಜ್ಞ, ರಾಜಕಾರಣಿ ಮತ್ತು ಸಮಾಜ ಸುಧಾರಕರಾಗಿದ್ದರು, ಅವರು ದೀನದಲಿತರು, ಮಹಿಳೆಯರು ಮತ್ತು ಕಾರ್ಮಿಕರ ಸಾಮಾಜಿಕ ತಾರತಮ್ಯದ ವಿರುದ್ಧ ಹೋರಾಡಿದರು. 1990 ರಲ್ಲಿ ಅವರಿಗೆ ಮರಣೋತ್ತರವಾಗಿ ಭಾರತ ರತ್ನ ನೀಡಲಾಯಿತು.
ಕಳೆದ ತಿಂಗಳು ತಮ್ಮ ಮನ್ ಕಿ ಬಾತ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿ, ಭಾರತೀಯ ಸಂವಿಧಾನವನ್ನು ರಚಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳಿದರು.
ಇಂದು ಟ್ವಿಟ್ ಮೂಲಕ ಕೂಡ ಮೋದಿ ಸಂವಿಧಾನ ಶಿಲ್ಪಿಗೆ ಗೌರವ ಸಲ್ಲಿಸಿದ್ದಾರೆ.