ಶಿರಸಿ: ಅಕಾಲಿಕ ಮಳೆ ಉತ್ತರ ಕನ್ನಡದ ಕೃಷಿ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ ಬೀರಿದೆ. ಕೊಯ್ಲು ಮಾಡಿ ಕುತ್ರಿಯಲ್ಲಿ ಭದ್ರವಾಗಿಟ್ಟುಕೊಳ್ಳುತ್ತಿದ್ದ ಭತ್ತವನ್ನು ಘಟ್ಟದ ಮೇಲಿನ ತಾಲೂಕಿನ ರೈತರು ತರಾತುರಿಯಲ್ಲಿ ಅವಲಕ್ಕಿ ಮಾಡಲು ನೀಡಬೇಕಾದ ಪರಿಸ್ಥಿತಿ ಎಲ್ಲೆಡೆ ಕಾಣುವಂತಾಗಿದೆ.
ನಾಟಿಯಿoದ ಕೊಯ್ಲಿನವರೆಗೂ ಬಿಡದ ಪ್ರಸಕ್ತ ವರ್ಷ ಮುಂಗಾರು ಮಳೆ ಆರಂಭದಲ್ಲೇ ಎಡಬಿಡದೇ ಸುರಿದ ಪರಿಣಾಮ ಉಕ್ಕೇರಿದ ಪ್ರವಾಹದಿಂದಾಗಿ ನಾಟಿ ಮಾಡಿದ ಭತ್ತದ ಸಸಿ ಕೊಚ್ಚಿ ಹೋಗಿತ್ತು. ಮರು ನಾಟಿ ಕಾರ್ಯಕ್ಕೆ ಮುಂದಾದ ರೈತರು ದುಬಾರಿ ದರದಲ್ಲಿ ದೊರೆತ ಸಸಿ ಕಟ್ಟನ್ನು ತಂದು ಮರು ನಾಟಿ ಮಾಡಿದ್ದರು. ಇವೆಲ್ಲವುಗಳ ನಡುವೆ ಬೆಳೆದ ಭತ್ತದ ಪೈರನ್ನು ಕೊಯ್ಲು ಮಾಡುತ್ತಿದ್ದಂತೆ ಮತ್ತೆ ಕಾಟ ಕೊಟ್ಟಿತ್ತು.
ಭತ್ತದ ಕುತ್ರಿಗಳುಭತ್ತದ ಕೊಯ್ಲು ಕೊನೆಗೊಂಡ ಬಳಿಕ ಗದ್ದೆಗಳಲ್ಲಿ ಎಲ್ಲೆಡೆ ಕಂಡು ಬರುತ್ತಿದ್ದವು. ಸಾಮಾನ್ಯವಾಗಿ ತುಳಸಿ ಹಬ್ಬದ ಸಮಯದಲ್ಲಿ ಗದ್ದೆ ಕೊಯ್ಲು ಕೊನೆಗೊಳ್ಳುವುದು ವಾಡಿಕೆ. ಅಂತೆಯೇ ಸಂಕ್ರಾoತಿ ಹಬ್ಬದ ಪಾಡ್ಯದಲ್ಲಿ ಭತ್ತ ಬಡಿಯುವ ಕಾರ್ಯದಲ್ಲಿ ಕೃಷಿಕರು ನಿರತರಾಗುತ್ತಾರೆ. ಆದರೆ ಪ್ರಸಕ್ತ ವರ್ಷದ ಮಳೆ ರೈತರ ಲೆಕ್ಕಾಚಾರವನ್ನು ತಲೆ ಕೆಳಗಾಗಿಸಿದೆ. ಕೃಷಿಯೊಂದಿಗೆ ಹೈನುಗಾರಿಕೆಯನ್ನು ಉಪ ಕಸುಬಾಗಿಸಿಕೊಂಡವರು ಬಹುತೇಕ ಸಾಂಪ್ರದಾಯಿಕ ಪದ್ಧತಿಯಲ್ಲಿ ಭತ್ತದ ಕೊಯ್ಲು ಮಾಡುತ್ತಾರೆ. ಆದರೆ ಪ್ರಸಕ್ತ ವರ್ಷ ಸುರಿದ ಮಳೆಯಲ್ಲಿ ಯಂತ್ರಗಳ ಮೂಲಕ ಕೊಯ್ಲು ಕಾರ್ಯ ಕೈಗೊಂಡು ಭತ್ತವನ್ನಾದರೂ ಉಳಿಸಿಕೊಳ್ಳಲು ರೈತರು ಹೆಣಗಾಡಿದ್ದರು.
ಹೀಗಾಗಿ ಗದ್ದೆಗಳಲ್ಲಿ ಕುತ್ರಿಗಳನ್ನು ಕಾಣುವುದು ಅಪರೂಪ ಎನ್ನುವಂತಾಗಿದೆ. ಹೈನುಗಾರರಿಗೆ ಎದುರಾದ ಮೇವಿನ ಚಿಂತೆ ಕಾಡಿದೆ. ಕಟಾವು ಮಾಡಿದ ಕೇಯನ್ನು ಒಂದೆರೆಡು ದಿನಗಳ ಕಾಲ ಗದ್ದೆಯಲ್ಲಿ ಒಣಗಿಸಿ ಕುತ್ರಿ ಹಾಕುವುದು ಸಂಪ್ರದಾಯ. ಹೀಗೆ ಒಣಗಿಸಿದ ಹುಲ್ಲು ಉತ್ತಮ ಗುಣಮಟ್ಟದ ಮೇವಾಗಿ ದನಕರುಗಳಿಗೆ ಆಹಾರವಾಗುತ್ತದೆ. ಆದರೆ ಈ ವರ್ಷ ಸುರಿದ ಮಳೆಯಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ ಕೊಯ್ಲು ಮಾಡದಂತಾಗಿದೆ. ಕಟಾವು ಯಂತ್ರದ ಮೂಲಕ ಕೊಯ್ಲು ಮಾಡಿದ ಹುಲ್ಲು ಗದ್ದೆಯಲ್ಲಿ ತುಂಬಿಕೊoಡ ನೀರಿನಲ್ಲಿ ಕೊಳೆತು ಹೋಗಿದ್ದು, ಹೈನುಗಾರಿಕೆಯನ್ನು ಕುಸಬಾಗಿಸಿಕೊಂಡವರಿಗೆ ಮೇವಿನ ಚಿಂತೆ ಎದುರಾಗಿದೆ.