ಸಿದ್ದಾಪುರ: ಈಗಿನ್ನೂ ಮಳೆಗಾಲ ಪ್ರಾರಂಭವೋ, ಇದಿನ್ನು ಯಾವಾಗ ಮುಗಿಯುವುದು. ನಮ್ಮ ಭತ್ತದ ಬೆಳೆಗಳೆಲ್ಲ ನೀರಲ್ಲಿ ಮುಳುಗಿ ಬೆಳೆಗಾರರು ಸಂಕಷ್ಟಪಡುವಂತಾಗಿದೆ.
ಮಳೆ ಇಂದು ಇಲ್ಲ ಬಿಸಿಲಿನ ವಾತಾವರಣ ಇದೆ ಎಂದು ಭತ್ತ ಕಟಾವು ಮಾಡಲು ಮುಂದಾದರೆ ರಾತ್ರಿ ಸುರಿಯುವ ಮಳೆಯಿಂದ ಕಟಾವು ಮಾಡಿದ ಭತ್ತದ ಗದ್ದೆಯಲ್ಲಿ ನೀರು ನಿಂತು ಬೆಳೆಹಾನಿ ಸಂಭವಿಸುತ್ತಿದ್ದು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎಂದು ಬೆಳೆಗಾರರ ಅಂಬೋಣವಾಗಿದೆ. ದಿನದಿಂದ ದಿನಕ್ಕೆ ಬೆಳೆಹಾನಿ ಪ್ರಮಾಣ ಹೆಚ್ಚುತ್ತಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
ತಾಲೂಕಿನಲ್ಲಿ ಸುಮಾರು ಇಂದಿನವರೆಗೆ 550 ರಿಂದ 600 ಹೆಕ್ಟೇರ್ ಭತ್ತದ ಕ್ಷೇತ್ರದಲ್ಲಿ ಕಟಾವು ಆಗಿದೆ. ಅಕಾಲಿಕ ಮಳೆಯಿಂದ 65.57 ಹೆಕ್ಟೇರ್‍ನಲ್ಲಿ ಹಾನಿ ಉಂಟಾಗಿದೆ. ಹಾನಿ ಸಮೀಕ್ಷೆ ಮಾಡಲಾಗುತ್ತಿದೆ. ಬೆಳೆ ಹಾನಿ ಸಂಭವಿಸಿದ ರೈತರು ಸ್ಥಳೀಯ ಗ್ರಾಪಂಗೆ ಅಥವಾ ಕೃಷಿ ಇಲಾಖೆಗೆ ಮಾಹಿತಿ ನೀಡಬೇಕು. – ಪ್ರಶಾಂತ ಜಿ.ಎಸ್.ಕೃಷಿ ಅಧಿಕಾರಿ ಸಿದ್ದಾಪುರ.