• first
    second
    third
    previous arrow
    next arrow
  • ಯಕ್ಷಗಾನ ಅಪಸವ್ಯಕ್ಕೆ ಕಡಿವಾಣ ಹಾಕಲು ನಿರ್ದಿಷ್ಟ ಚೌಕಟ್ಟು ನಿರ್ಮಾಣಕ್ಕೆ ಆಗ್ರಹ

    300x250 AD


    ಯಲ್ಲಾಪುರ: ಯಕ್ಷಗಾನದಲ್ಲಿ ಅಪಸವ್ಯಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಯಕ್ಷಗಾನ ಅಕಾಡೆಮಿಯಿಂದ ಅಥವಾ ಪ್ರಾಜ್ಞರಿಂದ ನಿರ್ದಿಷ್ಟವಾದ ಚೌಕಟ್ಟು ನಿರ್ಮಿಸುವ ಅಗತ್ಯವಿದೆ ಎಂದು ಕಲಾವಿದರಾದ ಭಾಸ್ಕರ ಗಾಂವ್ಕರ ಬಿದ್ರೆಮನೆ ಹಾಗೂ ಸದಾಶಿವ ಭಟ್ಟ ಮಲವಳ್ಳಿ ಆಗ್ರಹಿಸಿದ್ದಾರೆ.


    ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಕ್ಷಗಾನದಲ್ಲಿ ಯಾರು, ಏನೇ ತಪ್ಪು ಮಾಡಿದರೂ ಬೇಧ-ಭಾವವಿಲ್ಲದೇ ಅದರ ಬಗೆಗೆ ಚರ್ಚಿಸಿ, ನಿರ್ಣಯ ನೀಡುವ ವೇದಿಕೆ ಇಂದಿನ ದಿನಗಳಲ್ಲಿ ಅತ್ಯಗತ್ಯ ಎಂದರು. ಮಹಾರಾಷ್ಟ್ರದ ನಾಗಪುರದ ಹೋಟೆಲ್ ಒಂದರ ಉದ್ಘಾಟನೆಯ ಸಂದರ್ಭದಲ್ಲಿ ನಾವು ಯಕ್ಷಗಾನ ವೇಷ ಧರಿಸಿ, ಮಸಾಲೆ ದೋಸೆಯನ್ನು ಅತಿಥಿಗಳಿಗೆ ತಂದು ನೀಡಿದ ವಿಡಿಯೊ ವೈರಲ್ ಆಗಿದೆ. ಇದು ಅಚಾತುರ್ಯವೇ ಹೊರತು ಪೂರ್ವ ನಿಯೋಜಿತವಲ್ಲ. ಇದರಿಂದ ಯಕ್ಷಗಾನ ಅಭಿಮಾನಿಗಳಿಗೆ ಬೇಸರವಾಗಿದ್ದಲ್ಲಿ ವಿಷಾದಿಸುವುದಾಗಿ ತಿಳಿಸಿದರು.


    ಯಕ್ಷಗಾನ ನೃತ್ಯ ಪ್ರದರ್ಶನ, ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆವು. ಅದೇ ವೇಳೆ ಕಾರ್ಯಕ್ರಮ ಆಯೋಜಕರ ಹೋಟೆಲ್ ಉದ್ಘಾಟನೆಯೂ ಇದ್ದು, ಅವರು ಗೌರವಪೂರ್ವಕವಾಗಿ ಮಸಾಲೆ ದೋಸೆಯನ್ನು ನಮ್ಮಿಂದ ಅತಿಥಿಗಳಿಗೆ ನೀಡಿಸುವ ಮೂಲಕ ಹೋಟೆಲ್ ಉದ್ಘಾಟನೆಯಾಗಲಿ ಎಂಬ ಉದ್ದೇಶದಿಂದ ಇದನ್ನು ಮಾಡಿಸಿದ್ದಾರೆ. ಕಲೆ, ಕಲಾವಿದರನ್ನು ಗೌರವದಿಂದಲೇ ಕಂಡಿದ್ದಾರೆ. ಆದರೆ ಕೇವಲ ವೈರಲ್ ಆದ ವಿಡಿಯೊ ನೋಡಿ, ಪೂರ್ವಾಪರ ವಿಚಾರಿಸದೇ ಅನಗತ್ಯವಾಗಿ ಕೆಲವರು ಅವಾಚ್ಯ ಶಬ್ದಗಳಿಂದ ನಮ್ಮನ್ನು ನಿಂದಿಸಿದ್ದಾರೆ. ವಿಷಯ ಅರಿಯದೇ ಈ ರೀತಿ ತೇಜೋವಧೆಗೆ ಮುಂದಾಗಿರುವುದು ಸರಿಯಲ್ಲ ಎಂದರು.

    300x250 AD


    ಯಕ್ಷಗಾನದಲ್ಲಿ ಅಪಸವ್ಯಗಳು ಹೊಸದೇನಲ್ಲ. ಲುಂಗಿ ಡಾನ್ಸ್, ಪಾಶ್ಚಾತ್ಯ ಕುಸ್ತಿ, ಸಿನಿಮಾ ಹಾಡು, ಕೋಳಿ ಅಂಕ ಇತ್ಯಾದಿ ಯಕ್ಷಗಾನೇತರವಾದ ವಿಷಯಗಳು ಯಕ್ಷರಂಗಕ್ಕೆ ಬಂದಿವೆ. ಅನೇಕ ಜಾಹೀರಾತುಗಳಲ್ಲಿ, ಇತರೆಡೆಗಳಲ್ಲಿ ಯಕ್ಷಗಾನ ಬಳಸಿಕೊಳ್ಳಲಾಗುತ್ತಿದೆ. ಆದರೆ ಆ ವಿಷಯಗಳ ಕುರಿತು ಯಾರೀ ಚಕಾರವೆತ್ತುತ್ತಿಲ್ಲ. ಇಂತಹ ಅಪಸವ್ಯಗಳು ಮುಂದೆ ನಡೆಯದಂತೆ ಕಟ್ಟುನಿಟ್ಟಿನ ಚೌಕಟ್ಟು ರೂಪಿಸಲು ಈ ಮಸಾಲೆದೋಸೆ ಪ್ರಹಸನ ನಾಂದಿಯಾಗಬೇಕು ಎಂದರು.

    Share This
    300x250 AD
    300x250 AD
    300x250 AD
    Back to top