ಹೊನ್ನಾವರ: ಪಟ್ಟಣದ ಎಂ.ಪಿ.ಇ ಸೊಸೈಟಿಯ ಎಸ್.ಡಿ.ಎಂ ಪದವಿ ಮಹಾವಿದ್ಯಾಲಯದ ಕನ್ನಡ ವಿಭಾಗದ ಆಶ್ರಯದಲ್ಲಿ ಖ್ಯಾತ ಜಾನಪದ ವಿದ್ವಾಂಸ, ಕವಿ, ವಿಶ್ರಾಂತ ಪ್ರಾಚಾರ್ಯ ಡಾ. ಎನ್.ಆರ್.ನಾಯಕ ಅವರಿಗೆ ಕಾವ್ಯಾಭಿನಂದನೆ ಸಲ್ಲಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಕವಿ, ನಾಟಕಕಾರ ಡಾ.ಎಚ್.ಎಸ್.ಶಿವಪ್ರಕಾಶ ಡಾ. ಎನ್.ಆರ್.ನಾಯಕರು ಅನೇಕ ಸಾಹಿತ್ಯ-ಕಾವ್ಯಗಳನ್ನು ಸೃಷ್ಟಿ ಮಾಡಿದ್ದಾರೆ. ಅವರ ಶಬ್ಧ ಬಂಢಾರ ಅಪಾರವಾದದ್ದು, ಇಂದಿನ ಯುವ ತಲೆಮಾರಿನವರು ಇವರಿಂದ ಶಬ್ಧ ಸಂಪತ್ತನ್ನು ಕಲಿಯಬೇಕು. ಪದಗಳನ್ನು ಲೀಲಾಜಾಲವಾಗಿ ದುಡಿಸಿಕೊಳ್ಳುವ ಕಸುಬು ಅವರ ಕಾವ್ಯದ ಶಕ್ತಿ ಎಂದರು.
ಎಂ.ಪಿ.ಇ ಸೊಸೈಟಿಯ ಅಧ್ಯಕ್ಷ ಕೃಷ್ಣಮೂರ್ತಿ ಭಟ್ಟ ಶಿವಾನಿ ಮಾತನಾಡಿ, ಕನ್ನಡ ಸಾಹಿತ್ಯ ಲೋಕದಲ್ಲಿ ಇಷ್ಟೊಂದು ಕನ್ನಡ ಪ್ರೀತಿ ಜೀವಂತವಾಗಿಸಿಕೊಂಡವರು ತುಂಬಾ ಅಪರೂಪ. ಸಂಸ್ಥೆಯ ಕುರಿತಾದ ಅವರ ಪ್ರೀತಿ, ಆಡಳಿತಾತ್ಮಕ ನಿಲುವು ಅನುಕರಣೀಯವೆಂದರು.
ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯೆ ಡಾ. ವಿಜಯಲಕ್ಷ್ಮೀ ಎಂ. ನಾಯ್ಕ ಮಾತನಾಡಿ, ನಾಯಕರ ಶಿಸ್ತುಬದ್ಧ ಆಡಳಿತ, ಕನ್ನಡಪ್ರೀತಿ ನಮ್ಮ ಕಾಲೇಜಿನಲ್ಲಿ ಇಂದಿಗೂ ಉಳಿಸಿಕೊಂಡು ಬಂದಿದ್ದೇವೆ ಮತ್ತು ಮುಂದೆಯೂ ಉಳಿಸಿಕೊಂಡು ಹೋಗುತ್ತೇವೆ ಎಂದರು.
ನನ್ನ ಬದುಕೇ ಒಂದು ಮಹಾಕಾವ್ಯವಿದ್ದಂತೆ. ನನ್ನ ಅನುಭವಗಳೇ ನನ್ನ ಕಾವ್ಯದ ಜೀವಾಳ. ಎಸ್.ಡಿ. ಕಾಲೇಜಿನಲ್ಲಿ ಕನ್ನಡ ವಿಭಾಗದವರು ನನ್ನ ಕುರಿತಾಗಿ ಕಾರ್ಯಕ್ರಮ ಸಂಯೋಜಿಸಿರುವುದು ನನಗೆ ತುಂಬಾ ಸಂತಸವಾಗಿದೆ ಎಂದು ಡಾ. ಎನ್.ಆರ್.ನಾಯಕ ನುಡಿದರು.
ಡಾ. ಎನ್. ಆರ್. ನಾಯಕರ ಕಾವ್ಯದಲ್ಲಿ ಜನಪರ ನಿಲುವು ಎನ್ನುವ ವಿಷಯದ ಮೇಲೆ ಸುಮುಖಾನಂದ ಜಲವಳ್ಳಿ ಮಾತನಾಡಿ ಸಮಾಜದ ಮದ್ಯ ನಿಂತು ಸಮಾಜದ ತುಡಿತ ತಲ್ಲಣಗಳನ್ನು ಕಾವ್ಯವಾಗಿ ದುಡಿಸಿಕೊಂಡವರು ಇವರು. ಇವರ ಕವಿತೆಗಳಲ್ಲಿ ಒಂದು ಸಶಕ್ತ ಸಮುದಾಯವನ್ನು ಮೂಲೆಗೆ ತಳ್ಳಿದ ಕುರಿತು ಅಸಾಮಾಧಾನ ವ್ಯಕ್ತವಾಗಿದೆ ಮತ್ತು ತಳವರ್ಗದವರ ಪರವಾಗಿ ನಿಲ್ಲುವ ಸಂವೇದನೆ ಕಂಡುಬರುತ್ತದೆ ಎಂದರು.
ಡಾ. ಜಿ. ಎಸ್. ಹೆಗಡೆ ನಾಯಕರ ಕಾವ್ಯದಲ್ಲಿ ಆದ್ಯಾತ್ಮದ ಹೊಳಹು ಎಂಬ ವಿಷಯದ ಮೇಲೆ ಮಾತನಾಡಿ ಅವರ ಬದುಕಲ್ಲಿ ಇರುವ ಆಧ್ಯಾತ್ಮವನ್ನೇ ಬರಹದಲ್ಲಿ ಗಮನಿಸುತ್ತೇವೆ. ನಿಜದ ಮನೆಯನ್ನು ನಾನೇ ತಲುಪಬೇಕು ಎನ್ನುವ ಅವರ ಮಾತು ನಮ್ಮೊಳಗನ್ನು ನಾವು ತಿಳಿಯುವ ಭಾವವಾಗಿ ಕಾವ್ಯದುದ್ದಕ್ಕೂ ತೋರುತ್ತದೆ ಎಂದರು.
ಕಾವ್ಯಾವಲೋಕನದ ನಂತರದಲ್ಲಿ ಡಾ. ಶ್ರೀಪಾದ ಶೆಟ್ಟಿ, ಪ್ರಭಾಕರ ಹೆಗಡೆ, ಡಾ. ಪಿ. ಚಂದ್ರಿಕಾ, ಡಾ. ಎಚ್. ಎಸ್. ಅನುಪಮಾ, ಡಾ. ಸಂಧ್ಯಾ ಹೆಗಡೆ ದೊಡ್ಡಹೊಂಡ ಅವರಿಂದ ಕವಿಗೋಷ್ಠಿ ನಡೆಯಿತು. ಇದೇ ಸಂದರ್ಭದಲ್ಲಿ ಕೆ.ಆರ್.ಶ್ರೀಲತಾ, ಸಂಗೀತಾ ನಾಯ್ಕ ಎನ್.ಆರ್.ನಾಯಕರ ಗೀತೆಗಳನ್ನು ಹಾಡಿದರು. ತಬಲಾದಲ್ಲಿ ಗೋಪಾಲಕೃಷ್ಣ ಹೆಗಡೆ ಕಲ್ಭಾಗ, ಸಂವಾದಿನಿಯಲ್ಲಿ ಹರೀಶ್ಚಂದ್ರ ನಾಯ್ಕ ಇಡಗುಂಜಿ ಸಹಕರಿಸಿದರು. ಪ್ರಶಾಂತ ಹೆಗಡೆ ಸ್ವಾಗತಿಸಿದರು. ವಿದ್ಯಾಧರ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ನಾಗರಾಜ ಹೆಗಡೆ ಅಪಗಾಲ ವಂದಿಸಿದರು.