ಅಂಕೋಲಾ: ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಜಿಲ್ಲಾ ಘಟಕದಿಂದ ಬೆಳಂಬಾರದ ಪ್ರಸಿದ್ಧ ನಾಟಿ ವೈದ್ಯ ಹನುಮಂತ ಗೌಡ ಅವರನ್ನು ಸನ್ಮಾನಿಸಲಾಯಿತು.
ಉಡುಪಿಯ ಶ್ರೀ ಕೃಷ್ಣ ಮಠದ ಪರ್ಯಾಯ ಶ್ರೀ ಆದಮಾರು ಮಠದಿಂದ ನೀಡಲ್ಪಡುವ ‘ಕೃಷ್ಣಾನುಗ್ರಹ ಪ್ರಶಸ್ತಿ’ಗೆ ಹನುಮಂತ ಗೌಡ ಭಾಜನರಾಗಿರುವುದು ಹೆಮ್ಮೆಯ ವಿಷಯ. ಈ ಹಿನ್ನೆಲೆಯಲ್ಲಿ ಹನುಮಂತ ಗೌಡರ ಚಿಕಿತ್ಸಾಲಯದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಹಿರಿಯ ಕಲಾವಿದ ದೇವಿದಾಸ ಸುವರ್ಣ, ಹನುಮಂತ ಗೌಡರು ರೋಗಿಗಳ ಪಾಲಿಗೆ ದೇವರಿದ್ದಂತೆ. ಚಿಕಿತ್ಸೆಯ ಹೆಸರಲ್ಲಿ ಲೂಟಿ ನಡೆಯುತ್ತಿರುವ ಇಂದಿನ ದಿನಗಳಲ್ಲಿ ಸರಳ ಜೀವನ ನಡೆಸುತ್ತ ಬಂದ ರೋಗಿಗಳಿಗೆ ಆರ್ಥಿಕ ಭಾರವಾಗದಂತೆ ಚಿಕಿತ್ಸೆ ನೀಡಿ ನಗುಮೊಗದಿಂದ ಗುಣಮುಖರಾಗಿ ಮನೆಗೆ ಹೋಗುವಂತೆ ಮಾಡುತ್ತಿರುವ ಅವರ ಕಾರ್ಯ ಮಾದರಿ ಎಂದರು.
ಇನ್ನೋರ್ವ ಅತಿಥಿಯಾಗಿದ್ದ ಕೆಎಲ್‍ಇ ಮಹಿಳಾ ಕಾಲೆಜಿನ ಪ್ರಾಚಾರ್ಯೆ ಸ್ಮೀತಾ ಫಾತರಪೇಕರ್ ಮಾತನಾಡಿ, ಹನುಮಂತ ಗೌಡರು ತಮ್ಮ ಸೇವೆಯ ಮೂಲಕ ರಾಜ್ಯ ಹೊರ ರಾಜ್ಯಗಳಲ್ಲಿ ಹೆಸರು ಮಾಡಿದ್ದಾರೆ. ಇಂಥವರನ್ನು ಸನ್ಮಾನಿಸುವುದು ಅವರ ಸೇವಾ ಕಾರ್ಯತತ್ಪರತೆಗೆ ಸಲ್ಲುವ ಗೌರವ ಎಂದರು.
ಅ.ಭಾ.ಸಾಹಿತ್ಯ ಪರಿಷದ್ ಜಿಲ್ಲಾ ಕಾರ್ಯದರ್ಶಿ ವಿಠ್ಠಲದಾಸ ಕಾಮತ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಅಭಾವಿಪ ಪ್ರಮುಖ ಪ್ರವೀಣ ನಾಯ್ಕ ವಂದಿಸಿದರು. ಈ ಸಂದರ್ಭದಲ್ಲಿ ವರದಿಗಾರರಾದ ರವಿ ಗೌಡ, ಅಕ್ಷಯ ನಾಯ್ಕ, ಪ್ರಮುಖರಾದ ಸಂದೀಪ ಗಾಂವಕರ್, ಪ್ರಜ್ಞಾ ಪ್ರದೀಪ ಆಚಾರಿ, ಲತಾ ವಿ. ಕಾಮತ್, ಆಸ್ಪತ್ರೆ ಸಿಬ್ಬಂದಿಗಳಾದ ಮೇಘನಾ ಎಸ್, ಲಕ್ಷ್ಮಿ ಪಿ. ಮತ್ತಿತರರು ಇದ್ದರು.