ಅಂಕೋಲಾ: ಪಡಿತರದಾರರಿಗೆ ವಿತರಣೆ ಮಾಡಿದ ಅಕ್ಕಿಯಲ್ಲಿ ಪ್ಲಾಸ್ಟಿಕ್ ಇದೆ ಎಂದು ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ ಕಾರಣ ಆಹಾರ ಇಲಾಖೆಯ ಉಪ ನಿರ್ದೇಶಕರಾದ ಮಂಜುನಾಥ ರೇವಣಕರ ತಾಲೂಕಿನ ಅಗಸೂರು ಗ್ರಾ.ಪಂ. ವ್ಯಾಪ್ತಿಯಲ್ಲಿನ ಸೊಸೈಟಿಯ ಗೋದಾಮಿಗೆ ಭೇಟಿ ನೀಡಿ ಅಕ್ಕಿಯನ್ನು ಪರಿಶೀಲಿಸಿದರು.
ಈ ಕುರಿತು ಮಾಹಿತಿ ನೀಡಿದ ಅವರು ಬಿಸಿಯೂಟ ಯೋಜನೆಯ ಶಾಲೆಗಳಿಗೆ ಪೂರೈಸುವ ಅಕ್ಕಿಯಲ್ಲಿ ಸಾರಯುಕ್ತ (ವಿಟಾಮಿನ್) ಅಕ್ಕಿಯ ಮಿಶ್ರಣವಿರುತ್ತದೆ. ಅಗಸೂರಿನ ಪಡಿತರ ಅಕ್ಕಿಯ ಗೋದಾಮಿನಲ್ಲಿ ಶಾಲೆಗಳ ಬಿಸಿಯೂಟ ಯೋಜನೆಗೆ ಪೂರೈಸುವ ಅಕ್ಕಿಯನ್ನೂ ದಾಸ್ತಾನು ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ನಾಲ್ಕೈದು ಚೀಲಗಳು ಅದಲು ಬದಲಾಗಿ ಸಾರ್ವಜನಿಕರಿಗೆ ಈ ಅಕ್ಕಿ ಹೋಗಿರಬಹುದು ಹೊರತು ಇದು ಪ್ಲಾಸ್ಟಿಕ್ ಅಕ್ಕಿಯಲ್ಲ ಎಂದು ಸ್ಪಷ್ಟನೆ ನೀಡಿದರು. ಆದರೂ ಗ್ರಾಮಸ್ಥರ ಅನುಮಾನ ಪರಿಹರಿಸುವ ನಿಟ್ಟಿನಲ್ಲಿ ತಾಂತ್ರಿಕ ವಿಶ್ಲೇಣೆಗಾಗಿ ಎರಡು ಪೊಟ್ಟಣ ಸ್ಯಾಂಪಲ್ ಗಳನ್ಬು ಪ್ರಯೋಗಾಲಯಕ್ಕೆ ಕಳುಹಿಸುವದಾಗಿ ಹೇಳಿದರು.
ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಚಂದ್ರಹಾಸ ರಾಯ್ಕರ ಮಾತನಾಡಿ ಮಕ್ಕಳಿಗೆ ಪೌಷ್ಟಿಕಾಂಶವನ್ನು ಪೂರೈಸುವ ನಿಟ್ಟಿನಲ್ಲಿ ಸರಕಾರ ಬಿಸಿಯೂಟ ಯೋಜನೆಯ ಪ್ರತೀ ಕ್ವಿಂಟಲ್ ಅಕ್ಕಿಯಲ್ಲಿ ಒಂದು ಕೇಜಿಯಂತೆ ಸಾರಯುಕ್ತ (ವಿಟಾಮಿನ್) ಕೃತಕ ಅಕ್ಕಿಯನ್ನು ಮಿಶ್ರಣ ಮಾಡಲಾಗುತ್ತದೆ. ಈ ಅಕ್ಕಿ ಸಾಮಾನ್ಯ ಅಕ್ಕಿಗಿಂತ ಸ್ವಲ್ಪ ಭಿನ್ನವಾಗಿ ಕಾಣುತ್ತದೆ ಹೊರತು ಪ್ಲಾಸ್ಟಿಕ್ ಅಕ್ಕಿಯಲ್ಲ. ಈ ಅಕ್ಕಿಯ ಕುರಿತು ಈಗಾಗಲೇ ತಾಲೂಕಿನಲ್ಲಿರುವ ಎಲ್ಲ ಶಾಲಾ ಮುಖ್ಯಾಧ್ಯಾಪಕರಿಗೆ ಮಾಹಿತಿ ನೀಡಿದ್ದೇವೆ, ಹಾಗೂ ವಿದ್ಯಾರ್ಥಿಗಳ ಪಾಲಕರಿಗೂ ತಿಳಿಸಲು ಹೇಳಿದ್ದೇವೆ. ಇದರ ಬಗ್ಗೆ ಮಾಹಿತಿ ಕೊರತೆಯಿಂದ ಗ್ರಾಮಸ್ಥರು ಗಾಬರಿಗೊಳ್ಳುವಂತಾಯಿತು ಎಂದರು.
ತಾಲೂಕಾ ದಂಡಾಧಿಕಾರಿ ಉದಯ ಕುಂಬಾರ ಸಾರ್ವಜನಿಕರಿಗೆ ಯಾವುದಕ್ಕೂ ಗಾಬರಿಯಾಗುವ ಅವಶ್ಯಕತೆಯಿಲ್ಲ ಅಕ್ಕಿ ಪೂರೈಕೆಯಲ್ಲಿ ಯಾವುದೇ ಲೋಪವಾಗದಂತೆ ಇಲಾಖೆ ವತಿಯಿಂದ ಕಟ್ಟೆಚ್ಚರವಹಿಸಲಾಗುತ್ತಿದೆ ಹಾಗೂ ಪಡಿತರ ಅಕ್ಕಿ ದುರುಪಯೋಗವಾಗದಂತೆಯೂ ಕೂಡ ಹಲವು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದರು.
ಅಂಕೋಲಾ ಹೊರತುಪಡಿಸಿ ಬೇರೆ ತಾಲೂಕುಗಳಲ್ಲಿಯೂ ಬಿಸಿಯೂಟದ ಅಕ್ಕಿ ಜೊತೆ ಈ ರೀತಿಯ ಮಿಶ್ರಣದ ಅಕ್ಕಿಯು ಸೇರಿದೆ ಎನ್ನಲಾಗಿದ್ದು ,ಅದನ್ನು ಸೇವಿಸಿದವರಿಗೆ ಯಾವುದೇ ರೀತಿಯ ಹಾನಿಯಾದ ವರದಿಯಾಗಿಲ್ಲ.
ರಾಮನಗರ ಜಿಲ್ಲೆಯಲ್ಲಿ ಈ ಹಿಂದೆ ನೀಡಲಾದ ಇದೇ ರೀತಿ ಅಕ್ಕಿ ಬಗ್ಗೆ ಸಾರ್ವಜನಿಕರಿಂದ ಅಪಸ್ವರ – ಅನುಮಾನವ್ಯಕ್ತವಾಗಿದ್ದು, ಪ್ರಯೋಗಾಲಯದವರದಿಯಲ್ಲಿ ಅದುಪ್ಲಾಸ್ಟಿಕ್ ಅಕ್ಕಿ ಯಾಗಿರದೆ, ಸಾರವರ್ಧಕ ಅಕ್ಕಿ ಎಂದು ಸ್ಪಪಡಿಸಲಾಗಿತ್ತು. ಪೌಷ್ಟಿಕಾಂಶ ಕೊರತೆ ಇರುವಮಕ್ಕಳಲ್ಲಿವಿಟಮಿನ್, ಕಬ್ಬಿಣಾಂಶ,ಪೋಲಿಕ್ ಆಸಿಡ್ ಮೊದಲಾದ ಪೋಷಕಾಂಶಗಳನ್ನು ಒದಗಿಸಲು ಭಾರತೀಯ ಆಹಾರ ನಿಗಮದಿಂದ ಬಿಸಿಯೂಟದ ಅಕ್ಕಿಯಲ್ಲಿ ಈ ರೀತಿ ಮಿಶ್ರಣ ಮಾಡಿ ನೀಡಲಾಗುತ್ತಿದೆ. ಒಟ್ಟಿನಲ್ಲಿ ತಾಲೂಕಿನಲ್ಲಿ ಸದ್ದು ಮಾಡಿದ ಪ್ಲಾಸ್ಟಿಕ್ ಅಕ್ಕಿ ವಿಚಾರಕ್ಕೆ ಸಂಬಂಧಿಸಿದಂತೆ ಆಯಾ ಇಲಾಖೆಗಳು, ಮತ್ತು ಮುಖ್ಯಸ್ಥರು ಜನಸಾಮಾನ್ಯರಲ್ಲಿರುವ ಆತಂಕ ದೂರ ಮಾಡಬೇಕಿದೆ.
ಸ್ಥಳದಲ್ಲಿ ಆಹಾರ ನಿರೀಕ್ಷಕ ಸಂತೋಷ ಯಳಗದ್ದೆ, ಅಗಸೂರ ಗ್ರಾ.ಪಂ.ಅಧ್ಯಕ್ಷ ರಾಮಚಂದ್ರ ನಾಯಕ, ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಬಾಲಚಂದ್ರ ನಾಯಕ, ಯುವ ಒಕ್ಕೂಟದ ಅಧ್ಯಕ್ಷ ಗೋಪಾಲ ನಾಯಕ(ಅಡ್ಲೂರ), ಬೀರಣ್ಣ ನಾಯಕ, ಗೋಪಾಲ ನಾಯಕ, ತುಳಸು ಗೌಡ ಗ್ರಾಮಸ್ಥರು ಉಪಸ್ಥಿತರಿದ್ದರು.