ಅಂಕೋಲಾ: ಚೆನಗಾರದ ಸರಕಾರಿ ಪ್ರೌಢ ಶಾಲೆಯ ಆವರಣದಲ್ಲಿ ಡಿಸೆಂಬರ್ 5ರಂದು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಉಚಿತ ಆರೋಗ್ಯ ಹಾಗೂ ದಂತ ತಪಾಸಣಾ ಮೇಳವನ್ನು ಹಮ್ಮಿಕೊಳ್ಳಲಾಗಿದೆ.
ಲಯನ್ಸ್ ಕ್ಲಬ್ ಅಂಕೋಲಾ ಕರಾವಳಿ, ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆ, ಗ್ರಾಮ ಪಂಚಾಯಿತಿ ಅಚವೆ, ಸಾರ್ವಜನಿಕ ಗಣೇಶೋತ್ಸವ ಸಮಿತಿ ಚೆನಗಾರ ಇವರ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಲಯನ್ಸ್ ಕ್ಲಬ್ ಝೋನ್ ಚೇರ್ ಪರ್ಸನ್ ಮಹಾಂತೇಶ ರೇವಡಿ ಹೇಳಿದರು. ಅವರು ಪಟ್ಟಣದಲ್ಲಿ ಶುಕ್ರವಾರ ಕರೆದ ಸುದ್ದಿಗೋಷ್ಠಿಯಲ್ಲಿ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದರು. ಲಯನ್ಸ್ ಕ್ಲಬ್ ಅಧ್ಯಕ್ಷ ಡಾ. ಕರುಣಾಕರ ನಾಯ್ಕ ಮಾತನಾಡಿ, ಶಿಬಿರದಲ್ಲಿ ಹೃದಯ ರೋಗ, ಮಧುಮೇಹ, ಚರ್ಮರೋಗ, ಮಕ್ಕಳ, ಮೂಳೆ, ಸ್ತ್ರೀರೋಗ, ನೇತ್ರ, ಕಿವಿ-ಮೂಗು-ಗಂಟಲು, ದವಡೆ-ಬಾಯಿಯ ಕ್ಯಾನ್ಸರ್ ತಜ್ಞ ವೈದ್ಯರಿಂದ ರೋಗಿಗಳನ್ನು ಪರೀಕ್ಷಿಸಲಾಗುವುದು. ಕ್ರಿಮ್ಸ್ ನಿರ್ದೇಶಕ ಡಾ. ಗಜಾನನ ನಾಯಕ ಮುಂದಾಳತ್ವದಲ್ಲಿ ಈ ಮೇಳ ನಡೆಯಲಿದೆ. ಭಾಗವಹಿಸುವವರು ಆಧಾರ ಕಾರ್ಡನ್ನು ಕಡ್ಡಾಯವಾಗಿ ತರಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ಸದಾನಂದ ಶೆಟ್ಟಿ, ಖಜಾಂಚಿ ಓಂಪ್ರಕಾಶ ಪಟೇಲ, ಸದಸ್ಯರಾದ ಶಂಕರ ಹುಲಸ್ವಾರ, ಹಸನ್ ಶೇಖ್ ಇತರರಿದ್ದರು.