ಯಲ್ಲಾಪುರ: ನಿತ್ಯವೂ ಭಗವದ್ಗೀತೆ ಪಠಣದಿಂದ ಅದರ ಸಾರದ ಚಿಂತನೆಯಿಂದ ಆರೋಗ್ಯ, ಐಶ್ವರ್ಯ ಲಭಿಸುತ್ತದೆ ಎನ್ನುವುದನ್ನು ಕಳೆದ 13 ವರ್ಷಗಳ ಗೀತಾಭಿಯಾನದ ಪರಿಣಾಮದಿಂದ ಕಂಡುಕೊಳ್ಳಲಾಗಿದೆ. ಇದು 14 ನೆಯ ವರ್ಷ ಅಭಿಯಾನ ನಾಡಿನಾದ್ಯಂತ ಪೂಜ್ಯ ಸೋಂದಾ ಸ್ವರ್ಣವಲ್ಲೀ ಮಠಾಧೀಶರು ರಾಜ್ಯದ ಪ್ರತಿ ಜಿಲ್ಲೆ-ಜಿಲ್ಲೆಗಳಿಗೆ ಗೀತೆಯ ಮಹತ್ವವನ್ನು ಸಾರುತ್ತಿದ್ದಾರೆ ಎಂದು ಶ್ರೀಶಾರದಾಂಬಾ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ, ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ತಾಲೂಕಾಧ್ಯಕ್ಷ ಶಂಕರ ಭಟ್ಟ ತಾರೀಮಕ್ಕಿ ಹೇಳಿದರು.
ಅವರು ಡಿ.4 ರಂದು ಪಟ್ಟಣದ ನಾಯಕನಕೆರೆಯ ಶ್ರೀಶಾರದಾಂಬಾ ದೇವಸ್ಥಾನದ ಆವಾರದಲ್ಲಿ ಶ್ರೀಶಾರದಾಂಬಾ ಸಂಸ್ಕøತ-ವೇದ ಪಾಠಶಾಲಾ ಸಭಾಭವನದಲ್ಲಿ ತಾಲೂಕಾ ಮಟ್ಟದ ಭಗವದ್ಗೀತಾ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಜಿಲ್ಲೆಯಲ್ಲೇ ಯಲ್ಲಾಪುರದಲ್ಲಿ ಪ್ರಾರಂಭದಿಂದಲೂ ಅತ್ಯುತ್ತಮ ರೀತಿಯಲ್ಲಿ ಅಭಿಯಾನ ಯಶಸ್ವಿಗೊಳಿಸಿದ್ದೇವೆ. ನಮ್ಮ ತಾಲೂಕಾ ಸಮಿತಿಗೆ ಬೆನ್ನೆಲುಬಾಗಿ ಅಂದಿನಿಂದ ಇಂದಿನವರೆಗೂ ಮಾತೃಮಂಡಳಿ ಮತ್ತು ಸೀಮಾ ಪರಿಷತ್ ಪದಾಧಿಕಾರಿಗಳು ಸಂಪೂರ್ಣ ಸಹಕಾರ ನೀಡಿದ್ದಾರೆ. ಆದರೆ ಕಳೆದೆರಡು ವರ್ಷ ಕೊರೋನಾದಿಂದ ಅಭಿಯಾನ ಅಷ್ಟು ಯಶಸ್ವಿಯಾಗಲಿಲ್ಲ. ಈ ವರ್ಷ ಸ್ವಲ್ಪಮಟ್ಟಿಗೆ ನಡೆಯುತ್ತಿದೆ. ತಾಲೂಕಿನ ಎಲ್ಲ ಸ್ಪರ್ಧಾ ವಿಜೇತ ವಿದ್ಯಾರ್ಥಿಗಳು ಜಿಲ್ಲಾಮಟ್ಟದಲ್ಲಿ ಉತ್ತಮ ರೀತಿಯಲ್ಲಿ ಆಯ್ಕೆಗೊಂಡು ತಾಲೂಕಿಗೆ ಕೀರ್ತಿ ತರಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕಾಧ್ಯಕ್ಷ ಎಸ್.ಎಲ್.ಜಾಲಿಸತ್ಗಿ ಮಾತನಾಡಿ, ಪೂಜ್ಯ ಶ್ರೀಗಳ ಆಶೀರ್ವಾದದಿಂದ ಮೂರ್ನಾಲ್ಕು ವರ್ಷಗಳಿಂದ ತಾಲೂಕಿನ ಅಭಿಯಾನದ ಹೊಣೆ ಹೊತ್ತಿದ್ದೇನೆ. ಗೀತೆ ಎಲ್ಲರಿಗೂ ಕೂಡ ಅತ್ಯಂತ ಮಹತ್ವವಾದುದು. ಅದನ್ನು ನಿತ್ಯ ಅಧ್ಯಯನ ಮಾಡುವುದರಿಂದ ನಮ್ಮ ವ್ಯಕ್ತಿತ್ವ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ. ಹೇಗೆ ಸಂಸ್ಕೃತ ಅಧ್ಯಯನದಿಂದ ಸುಸಂಸ್ಕೃತ ವ್ಯಕ್ತಿತ್ವ ನಿರ್ಮಾಣವಾಗುತ್ತದೋ, ಹಾಗೆಯೇ ಗೀತೆಯಿಂದ ಶ್ರೇಷ್ಠ ಮನುಷ್ಯತ್ವ ರೂಪಿಸಿಕೊಳ್ಳಬಹುದು ಎಂದರು.
ಮುಖ್ಯ ಅತಿಥಿಗಳಾಗಿದ್ದ ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲಾ ಮುಖ್ಯಾಧ್ಯಾಪಕಿ ಮುಕ್ತಾ ಶಂಕರ, ಸಿ.ಆರ್.ಪಿ ಸಂತೋಷ ನಾಯ್ಕ ಉಪಸ್ಥಿತರಿದ್ದರು. ಸಂಸ್ಕೃತ ಪಾಠಶಾಲಾ ಅಧ್ಯಾಪಕರಾದ ವೇದ ಘನಪಾಠಿ ವಿಶ್ವನಾಥ ಭಟ್ಟ ವೇದಘೋಷ ಪಠಿಸಿದರು. ಡಾ.ಶಿವರಾಮ ಭಾಗ್ವತ ಸ್ವಾಗತಿಸಿ, ನಿರ್ವಹಿಸಿದರು. ಮಾತೃಮಂಡಳಿ ಅಧ್ಯಕ್ಷೆ ರಮಾ ದೀಕ್ಷಿತ್ ವಂದಿಸಿದರು.
ನಿರ್ಣಾಯಕರಾಗಿ ಡಾ.ಶಿವರಾಮ ಭಾಗ್ವತ, ರಾಮನಾಥ ಭಟ್ಟ ಭಾಮೆಮನೆ, ವಿಶ್ವನಾಥ ಭಟ್ಟ, ಲಕ್ಷ್ಮಿ ಭಟ್ಟ ಆನೇಜಡ್ಡಿ ಕಾರ್ಯನಿರ್ವಹಿಸಿದರು.
ಮಾತೃಮಂಡಳಿ ಪ್ರಮುಖರಾದ ರಚನಾ ಹೆಗಡೆ, ಸಂಧ್ಯಾ ಕೊಂಡದಕುಳಿ, ಗಂಗಾ ಭಟ್ಟ, ಸುಮಾ ಭಟ್ಟ ಮತ್ತಿತರರು ಉಪಸ್ಥಿತರಿದ್ದರು.