ಕಾರವಾರ: ಧಾರವಾಡದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದ್ದು ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಸುವ ವಿಚಾರವಾಗಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದು ಉತ್ತಮ ಎಂದು ಮಾಜಿ ಸಚಿವ, ಹಾಲಿ ಶಾಸಕ ಆರ್. ವಿ. ದೇಶಪಾಂಡೆ ತಿಳಿಸಿದ್ದಾರೆ.
ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿಂದು ಪತ್ರಕರ್ತರೊಂದಿಗೆ ಮಾತನಾಡಿ ದೇಶಪಾಂಡೆ ಈ ಹಿಂದೆ ಬೆಳಗಾವಿಯಲ್ಲಿ ಅಧಿವೇಶನ ನಡೆಸುವಂತೆ ನಾವೇ ಒತ್ತಾಯಿಸಿದ್ದೆವು. ಆದ್ರೆ ಇದೀಗ ಪಕ್ಕದ ಧಾರವಾಡದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ. ಅಲ್ಲದೇ ಬೆಳಗಾವಿ ಮಹಾರಾಷ್ಟ್ರಕ್ಕೆ ಹೊಂದಿಕೊoಡಿದ್ದು ಕೊರೊನಾ ರೂಪಾಂತರಿ ಆತಂಕ ಸಹ ಇದೆ. ಅಲ್ಲದೇ ಅಧಿವೇಶನಕ್ಕೆ ಜನಪ್ರತಿನಿಧಿಗಳು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಜನರು ಸಹ ಆಗಮಿಸುವುದರಿಂದ ಈ ನಿಟ್ಟಿನಲ್ಲಿ ಸುರಕ್ಷತೆಯ ಕುರಿತು ಪರಿಶೀಲಿಸಿ ನಿರ್ಧಾರ ತೆಗೆದುಕೊಳ್ಳಬೇಕಿದೆ. ಆದ್ದರಿಂದ ಸರ್ಕಾರ ಬೆಳಗಾವಿಯಲ್ಲಿ ಸಾಧ್ಯವಾಗದಿದ್ದಲ್ಲಿ ಬೆಂಗಳೂರಿನಲ್ಲೇ ಅಧಿವೇಶನ ಕರೆಯಬೇಕಿದ್ದು ಯಾವುದೇ ಕಾರಣಕ್ಕೂ ಮುಂದೂಡುವುದು ಸರಿಯಲ್ಲ ಎಂದಿದ್ದಾರೆ.