ಯಲ್ಲಾಪುರ: ಯಾರು ಭಕ್ತಿ ಶೃದ್ಧೆಯಿಂದ ದೇವತಾ ಕಾರ್ಯವನ್ನು ನೆರವೇರಿಸುತ್ತಾರೆ ಅವರ ಬದುಕು ಸನ್ಮಾರ್ಗದಲ್ಲಿ ಸಾಗುತ್ತದೆ. ಬದುಕನ್ನು ಸಾರ್ಥಕಗೊಳಿಸಿಕೊಳ್ಳಲು ಇರುವ ಭಕ್ತಿಮಾರ್ಗವನ್ನು ನಾವೆಲ್ಲರೂ ಅನುಸರಿಸಬೇಕು ಎಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳವರು ನುಡಿದರು.
ಅವರು ತಾಲೂಕಿನ ಉಪಳೇಶ್ವರದ ಕಂಚನಳ್ಳಿಯ ಚೈತನ್ಯ ನಿಲಯದಲ್ಲಿ ಧಾರ್ಮಿಕ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಪ್ರತಿ ಕುಟುಂಬವೂ ಒಂದಲ್ಲ ಒಂದು ಯಜ್ಞಕಾರ್ಯದಲ್ಲಿ ತೊಡಗಬೇಕು. ಯಜ್ನ ಎಲ್ಲಿ ನಡೆಯುತ್ತದೆಯೋ ಅಲ್ಲಿ ಎಲ್ಲವೂ ಸಮೃಧ್ದಿಯಾಗಿರುತ್ತದೆ.ನಮ್ಮ ಬದುಕು ನಿಯಮ ನಿಷ್ಠೆಯೊಂದಿಗೆ ಸಾಗಬೇಕು.ಇದಿಲ್ಲದವರ ಬದುಕು ಅತ್ಯಂತ ಕಡೆ ಎನಿಸುತ್ತದೆ. ಮನುಷ್ಯ ಮಾಡುವ ಜಪ, ಪೂಜೆ ಕೂಡಾ ಒಂದು ಯಜ್ಞ. ಸರಿಯಾದ ನಿಯಮದೊಂದಿಗೆ ರೂಢಿಸಿಕೊಂಡು ಹೋಗಬೇಕು ಎಂದ ಶ್ರೀಗಳು ಆರೋಗ್ಯ ಸಾಧನೆಗೆ ಜಪಾನುಷ್ಠಾನ ಕೂಡಾ ಮುಖ್ಯ. ಪ್ರತಿ ಮನೆಯಲ್ಲಿ ಜಪ, ತಪ, ಭಗವದ್ಗೀತೆ ಪಠಣ, ಭಜನೆ ನಡೆಯಲಿ. ಆರೋಗ್ಯ ಪ್ರಾಪ್ತಿಗೆ ಅನುಷ್ಠಾನವೇ ಮುಖ್ಯ. ಚಿತ್ತ ಶುದ್ದಿಗೆ ಬೇಕಾದ ಕರ್ಮಾನುಷ್ಠಾನ ನಮ್ಮದಾಗಲಿ ಎಂದು ನುಡಿದರು.
ವೇದಮೂರ್ತಿ ನಾರಾಯಣ ಭಟ್ಟ ಮೊಟ್ಟೆಪಾಲ್ ವೇದಘೋಷಗೈದು ಪ್ರಾರ್ಥಿಸಿದರು. ತಿಮ್ಮಣ್ಣ ಹೆಗಡೆ ದಂಪತಿ ಶ್ರೀಗಳಿಗೆ ಫಲತಾಂಬೂಲ ಸಮರ್ಪಿಸಿದರು.