ಯಲ್ಲಾಪುರ: ಪರಿಷತ್ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿ ಗಣಪತಿ ಉಳ್ವೆಕರ್ ಗೆಲುವು ನಿಶ್ಚಿತ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ವಿಶ್ವಾಸ ವ್ಯಕ್ತಪಡಿಸಿದರು.
ಅವರು ತಾಲೂಕಿನ ಬಿಜೆಪಿ ಇಡಗುಂದಿ ಮಹಾಶಕ್ತಿಯ ಆಶ್ರಯದಲ್ಲಿ ಮಂಗಳವಾರ ವಜ್ರಳ್ಳಿ, ಮಾವಿನಮನೆ, ಇಡಗುಂದಿ ವ್ಯಾಪ್ತಿಯ ಮತದಾರರನ್ನು ಉದ್ದೇಶಿಸಿ, ವಿಧಾನಪರಿಷತ್ ಚುನಾವಣೆಯ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.ಜಿಲ್ಲೆಯಲ್ಲಿ ಈ ಚುನಾವಣೆಯನ್ನು ಪಕ್ಷ ಗಂಭೀರವಾಗಿ ತೆಗೆದುಕೊಂಡಿದ್ದು, ಮೊದಲ ಸುತ್ತಿನಲ್ಲಿಯೇ ಅಭ್ಯರ್ಥಿಯನ್ನು ಗೆಲ್ಲಿಸುವ ಬಗ್ಗೆ ಪಣ ತೊಡಲಾಗಿದೆ.ಮತದಾರರು ಎನೆಲ್ಲಾ ಆಮೀಷ ಬಂದರೂ, ಪಕ್ಷ ನಿಷ್ಠೆ ತೋರ್ಪಡಿಸಬೇಕು.ಈ ಚುನಾವಣೆಯ ಗೆಲುವು ಮುಂದಿನ ಚುನಾವಣೆಯ ಗೆಲುವಿಗೆ ನಾಂದಿ ಯಾಗಬೇಕೆಂದರು.
ಅಭ್ಯರ್ಥಿ ಗಣಪತಿ ಉಳ್ವೇಕರ ಮಾತನಾಡಿ,ಎಲ್ಲಾ ಮತದಾರರು ಒಮ್ಮನಸ್ಸಿನಿಂದ ನನಗೆ ಮತ ನೀಡಿ ಗೆಲ್ಲಿಸುವಲ್ಲಿ ಶ್ರಮಿಸಬೇಕೆಂದು ಮನವಿ ಮಾಡಿದರು.
ಪಕ್ಷದ ಜಿಲ್ಲಾ ವಕ್ತಾರ ನಾಗರಾಜ ನಾಯ್ಕ ಮಾತನಾಡಿ,ಪಕ್ಷ ಆಂತರಿಕ ಭಿನ್ನಮತ ನೀಗಿಸಿಕೊಂಡಿದ್ದು,ಚುನಾವಣೆಯನ್ನು ಯಶಸ್ವಿಯಾಗಿ ಎದುರಿಸಲು ಸಮರ್ಥವಾಗಿದೆ ಎಂದರು.
ತಾಲೂಕಾ ಅಧ್ಯಕ್ಷ ಗೋಪಾಲಕೃಷ್ಣ ಗಾಂವ್ಕಾರ, ಪ್ರಮುಖರಾದ ರೇಖಾ ಹೆಗಡೆ, ಶ್ರೀಕಾಂತ ಶೆಟ್ಟಿ, ಉಮೇಶ ಭಾಗ್ವತ್, ವಿವೇಕ ಹೆಬ್ಬಾರ, ಮುರಳಿ ಹೆಗಡೆ ಮುಂತಾದವರು ಇದ್ದರು.