ಮುಂಡಗೋಡ: ಕೋವಿಡ್ ಸೊಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಿರಶಿ ಪ್ರಭಾರಿ ಕುಮಟಾ ಸಹಾಯಕ ಆಯುಕ್ತ ರಾಹುಲ್ ಪಾಂಡೆ ನೇತೃತ್ವದ ತಂಡ ಟಿಬೆಟಿಯನ್ ಕಾಲೋನಿಗೆ ಭೇಟಿ ನೀಡಿ ಪರಿಶೀಲಿಸಿದರು.
ಶಿರಶಿ ಸಹಾಯಕ ಆಯುಕ್ತರು ರಜೆ ಮೇಲೆ ಇರುವುದರಿಂದ ಕುಮಟಾ ಸಹಾಯಕ ಆಯುಕ್ತ ರಾಹುಲ್ ಪಾಂಡೆ ಅವರ ನೇತೃತ್ವದ ತಂಡ ತಾಲೂಕಿನ ಟಿಬೆಟಿಯನ್ ಕಾಲೋನಿಯ ಮುಖ್ಯಸ್ಥರ ಜೊತೆ ಸೋಮವಾರ ಸಮಾಲೋಚನೆ ನಡೆಸಿದರು. ಕೋವಿಡ್ ಪ್ರಕರಣಗಳು ವಿದೇಶಿಗಳಲ್ಲಿ ಹೆಚ್ಚಾಗುತ್ತಿರುವುದರಿಂದ ದೇಶದಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಅದರಲ್ಲಿಯೂ ಟಿಬೆಟಿಯನ್ನರು ವಿದೇಶಗಳಿಂದ ಮುಂಡಗೋಡ ತಾಲೂಕಿಗೆ ಬರುತ್ತಿರುತ್ತಾರೆ. ಮುನ್ನೆಚ್ಚರಿಕೆಯಾಗಿ ಅಧಿಕಾರಿಗಳು ತಂಡ ಭೇಟಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಕೆಲ ತಿಂಗಳಗಳ ಹಿಂದೆ ಟಿಬೆಟಿಯನ್ ಕಾಲೋನಿಯಲ್ಲಿ ಕೋವಿಡ ಪ್ರಕರಣಗಳು ಹೆಚ್ಚಾಗಿದ್ದವು. ಮುಂಜಾಗ್ರತಾ ಕ್ರಮವಾಗಿ ಮುಂದೆ ಕೈಗೊಳ್ಳುವ ಕ್ರಮದ ಬಗ್ಗೆ ತಿಳಿಸಿದರು. ಈ ಹಿಂದೆ ಕೋವಿಡ್ ನಿಯಂತ್ರಿಸಲು ಕೈಗೊಂಡಿರುವ ಕ್ರಮದ ಬಗ್ಗೆ ಟಿಬೆಟಿಯನ್ ಮುಖ್ಯಸ್ಥರು ಅಧಿಕಾರಿಗಳಿಗೆ ವಿವರಿಸಿದರು. ಕೋವಿಡ್ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಕಾಲ ಕಾಲಕ್ಕೆ ಸರ್ಕಾರ ಕೈಗೊಳ್ಳುವ ಮಾರ್ಗಸೂಚಿಯನ್ನು ಪಾಲಿಸಬೇಕು. ವಿದೇಶಿಗಳಿಂದ ಬರುವ ಪ್ರತಿಯೊಬ್ಬರ ಮಾಹಿತಿಯನ್ನು ತಾಲೂಕಾಡಳಿತಕ್ಕೆ ಮಾಹಿತಿ ನೀಡಬೇಕು ಎಂದು ಸೂಚಿಸಿದರು.
ಈ ವೇಳೆ ತಹಸೀಲ್ದಾರ ಶ್ರೀಧರ ಮುಂದಲಮನಿ, ವೈದ್ಯಾಧಿಕಾರಿ ಎಚ್ ಎಫ್ ಇಂಗಳೆ, ಟಿಬೆಟಿಯನ್ ಆಡಳಿತ ಕಛೇರಿಯ ಚೇರಮನ್ ಲಾಕ್ಪಾ ಸಿರಿಂಗ್, ಡಿಟಿಆರ್ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ನವಾಂಗ್ ತುಪ್ಟೇನ್ ಉಪಸ್ಥಿತರಿದ್ದರು.