ಶಿರಸಿ: ಬಿಜೆಪಿ ಆಡಳಿತ ವಿರೋಧಿ ಅಲೆಯ ಕಾರಣಕ್ಕೆ ಈ ಬಾರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ಗೆಲುವು ನಿಶ್ಚಿತ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ದೀಪಕ ದೊಡ್ಡೂರು ಹೇಳಿದರು.ನಗರದ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಸೋಮವಾರ ಸುದ್ದಿಗೋಷ್ಟಿ ಆಯೋಜಿಸಿ ಮಾತನಾಡಿದ ಅವರು, ಉತ್ತರ ಕನ್ನಡದಲ್ಲಿ ವಿಧಾನ ಪರಿಷತ್ ಸ್ಥಾನ ಸದಾ ಕಾಂಗ್ರೆಸ್ ಜತೆಗಿದೆ. ಈ ಬಾರಿ ಕೂಡ ಭೀಮಣ್ಣ ನಾಯ್ಕ ಗೆಲುವು ನಿಶ್ಚಿತ ಎಂದರು. ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ಅವರು ಕೇವಲ ರಾಜಕೀಯಕ್ಕಷ್ಟೇ ಸೀಮಿತವಾಗಿಲ್ಲ. ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕವಾಗಿಯೂ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಜಿಲ್ಲಾದ್ಯಂತ ಚಿರಪರಿಚಿತರಾಗಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ, ಹಿರಿಯ ರಾಜಕಾರಣಿ ಆರ್. ವಿ. ದೇಶಪಾಂಡೆ ಜತೆ ಕಾರ್ಯ ಮಾಡಿದ ಅನುಭವವಿದ್ದು , ಮೇಲ್ಮನೆಗೆ ಸಮರ್ಥ ಅಭ್ಯರ್ಥಿಯಾಗಿದ್ದಾರೆ ಎಂದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆಡಳಿತ ವೈಫಲ್ಯವನ್ನೇ ಕೇಂದ್ರವಾಗಿಟ್ಟು ಕಾಂಗ್ರೆಸ್ ಪ್ರಚಾರ ನಡೆಸುತ್ತಿದೆ ಎಂದರು. ಕಾಂಗ್ರೆಸ್ ನಾಯಕರೆಲ್ಲ ಒಟ್ಟಾಗಿ ಕಾರ್ಯ ಮಾಡುತ್ತಿದ್ದು, ಈ ಬಾರಿ ಭೀಮಣ್ಣ ಅವರ ಗೆಲುವು ಶತಸಿದ್ಧ ಎಂದರು.
ಈ ವೇಳೆ ಪಕ್ಷದ ಪ್ರಮುಖರಾದ ಜಗದೀಶ ಗೌಡ, ಬಸವರಾಜ ದೊಡ್ಮನಿ, ಸತೀಶ ನಾಯ್ಕ, ಶ್ರೀಪಾದ ಹೆಗಡೆ, ಕುಮಾರ ಜೋಶಿ ಇದ್ದರು.