ಶಿರಸಿ: ಅಂತರಂಗದ ಅರಿವಿನ ಬೆಳಕು ಪ್ರಜ್ವಲಿಸಿದಾಗ ಆಧ್ಯಾತ್ಮಿಕ ಅರಿವಿನ ಕಿರಣಗಳು ಪ್ರಸ್ಪುಟಗೊಳ್ಳುತ್ತದೆ. ಭೌತಿಕದ ಲೌಕಿಕದಲ್ಲಿ ತುಂಬಾ ಸಹಜವಾದ ಅಜ್ಞಾನದ ಎಳೆಯನ್ನು ಮೀರಿನಿಂತು ಸುಜ್ಞಾನದ ಸುರಿಮಳೆಯನ್ನು ಸ್ವಾಗತಿಸಲು ಗಟ್ಟಿಯಾದ ಆಧ್ಯಾತ್ಮ ತತ್ವದ ಅಗತ್ಯ ಇದೆ. ಈ ನೆಲೆಯಲ್ಲಿ ಸತ್ಯ ಸಾಯಿಬಾಬಾ ರವರ ತತ್ವಾದರ್ಶಗಳು ಕೋಟಿ ಕೋಟಿ ಆಸ್ತಿಕರ ಮನಸೆಳೆದಿದೆ. ಪರಿಣಾಮ ಜಗತ್ತಿನ 130 ಕ್ಕೂ ಹೆಚ್ಚಿನ ರಾಷ್ಟ್ರಗಳಲ್ಲಿ ಸತ್ಯ ಸಾಯಿ ಭಕ್ತವೃಂದ ಜ್ಞಾನ, ಭಕ್ತಿ, ಶೃದ್ಧೆಯ ಕೃಷಿಯನ್ನು ನಿರಂತರವಾಗಿ ನಡೆಸಿಕೊಂಡು ಬಂದಿದ್ದು ಭಾರತೀಯ ಆಧ್ಯಾತ್ಮ ಪ್ರಪಂಚದಲ್ಲಿ ಉನ್ನತ ಸಾಧನೆಯಾಗಿದೆ ಎಂದು ನಿವೃತ್ತ ಪ್ರಾಚಾರ್ಯ ಸಾಹಿತಿ ಪ್ರೋ. ಡಾ. ಜಿ. ಎ. ಹೆಗಡೆ ಸೋಂದಾ ನುಡಿದರು.
ಅವರು ವಿ.ಪಿ. ಹೆಗಡೆ ಕೋಡ್ಸರ್ (ಹೊಸಮನೆ) ಸಂಚಾಲರು, ಕಾನ್ಸೂರು ಸತ್ಯ ಸೇವಾ ಸಮಿತಿ ಅವರ ಮನೆಯಲ್ಲಿ ಹಮ್ಮಿಕೊಂಡ ಸಾಯಿ ಭಜನಾ ಮೃತ ಕಾರ್ಯಕ್ರಮದ ಸಮಾರೋಪದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. ಭಜನೆಯಲ್ಲಿ ಜೀವನದ ಇಹ ಪರ ಸಾಧನೆ ಇದೆ. ಭಜನೆಯಲ್ಲಿ ರಾಗ, ತಾಳ, ಶುೃತಿ ಇರುವಂತೆಯೇ ಭಕ್ತಿ ಭಾವ ಶೃದ್ಧೆ ಇದೆ. ನಿರಕ್ಷರಿಗಳೂ, ಪಂಡಿತರೂ, ಪಾಮರರೂ ಯಾರು ಬೇಕಾದರೂ ಶೃದ್ಧೆಯಿಂದ ಭಜನೆಯನ್ನು ಮಾಡಬಹುದಾಗಿದೆ ಎಂದರು.
ಇನ್ನೊರ್ವ ಅತಿಥಿ ಲೇಖಕ ಗಣಪತಿ ಭಟ್ಟ ವರ್ಗಾಸನ ಆಧ್ಯಾತ್ಮ ತತ್ವದಲ್ಲಿರುವ ತಾತ್ವಿಕತೆ ಮತ್ತು ವೈಚಾರಿಕತೆ ಕುರಿತಾಗಿ ಚಿತ್ರಣ ನೀಡಿದರು.
ಸಾಯಿ ಬಾಬಾ ಬಾಲ ವಿಕಾಸ ಸಮಿತಿಯ ಮುಖ್ಯಸ್ಥೆ ಶ್ರೀಮತಿ ಸವಿತಾ ಭಟ್ಟ, ಅಧ್ಯಕ್ಷತೆ ವಹಿಸಿ ಸಾಯಿ ಪವಾಡ ಮತ್ತು ಆಧ್ಯಾತ್ಮಿಕ ಅಂಶಗಳನ್ನು ಕುರಿತು ವಿವರಿಸಿದರು.
ವಿ.ಪಿ. ಹೆಗಡೆ ಹೊಸ್ಮನೆ ಕೋಡ್ಸರ್ ದಂಪತಿಗಳು ಸ್ವಾಗತಗೈದು ಅತಿಥಿಗಳಿಗೆ ಗೌರವಾರ್ಪಣೆ ನೀಡಿ ಭಜನೆಗೆ ಸೇರಿದ ಭಕ್ತ ವೃಂದಕ್ಕೆ ಆತಿಥ್ಯ ನೀಡಿ ಸತ್ಕರಿಸಿದರು ಸುಬ್ರಾಯ ನಾಯ್ಕ ಕಾನ್ಸೂರು, ವಿ.ಪಿ. ಹೆಗಡೆ ಭಜನೆಗೆ ಸಾತ್ ನೀಡಿದರು. ನಾಗೇಶ ಶೇಟ್ ಕಾನ್ಸೂರು ಕಾರ್ಯಕ್ರಮ ನಿರ್ವಹಿಸಿದರು.