• Slide
  Slide
  Slide
  previous arrow
  next arrow
 • ‘ನಿಗಮ ಮಂಡಳಿ’ಗೆ ಕೆ ಜಿ ನಾಯ್ಕ ! ಅಲ್ಲಾಡಿತಾ ‘ಜೀವ ವೈವಿಧ್ಯ ಮಂಡಳಿ’ ?

  300x250 AD

  euk ವಿಶೇಷ: ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬೊಮ್ಮಾಯಿ ನೇತೃತ್ವದ ಸರಕಾರದಲ್ಲಿ ನಿಗಮ ಮಂಡಳಿ ಜವಾಬ್ದಾರಿಗಳು ಬದಲಾಗುತ್ತವೆ ಎಂಬ ಮಾತು ಓಡಾಡುತ್ತಲೇ ಇತ್ತು. ಆದರೆ ಒಂದಾದ ಮೇಲೊಂದು ವಿಘ್ನಗಳು ಬರುತ್ತಲೇ ಇತ್ತು. ಅಂತೂ ಈಗ ಅದಕ್ಕೆ ಪುಷ್ಠಿ ನೀಡುವಂತಹ ವಾತಾವರಣ ಸೃಷ್ಟಿಯಾಗಿದೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ.

  ಸರಕಾರದಲ್ಲಿ ಮುಖ್ಯಮಂತ್ರಿ ಬದಲಾದಾಗ, ನಿಗಮ ಮಂಡಳಿಗಳು ಬದಲಾಗುವ ಸಾಧ್ಯತೆಗಳು ಬಹುತೇಕ ಹೆಚ್ಚಿರುತ್ತದೆ. ತಮ್ಮ ಅತ್ಯಾಪ್ತರನ್ನು ಅಧ್ಯಕ್ಷ ಸ್ಥಾನಕ್ಕೆ ತಂದು ಕೂರಿಸುವುದು ಸರ್ವೇ ಸಾಮಾನ್ಯ. ಇದಕ್ಜೆ ಯಾವ ಪಕ್ಷವೂ ಹೊರತಲ್ಲ ಎಂಬುದು ಅಷ್ಟೇ ಸತ್ಯ. ಈ ಕಾರಣಕ್ಕೆ ನಿಗಮ ಮಂಡಳಿ ಪುನರಚನೆಯಾಗುವ ಸಂಭವ ಇದೆ ಎನ್ನಲಾಗಿದೆ.

  ಪ್ರಸ್ತುತ ವಿಧಾನ ಪರಿಷತ್ ಚುನಾವಣೆ ಕಾರಣಕ್ಕೆ ನೀತಿ ಸಂಹಿತೆ ಜಾರಿಯಲ್ಲಿದ್ದು, ಡಿ. 14 ರಂದು ಈ ನೀತಿ ಸಂಹಿತೆ ಕೊನೆಗೊಳ್ಳಲಿದೆ. ನಂತರ ಸ್ಥಳೀಯ ಸಂಸ್ಥೆಗಳ ಚುನಾವಣೆಯೂ ಡಿ. 27 ರಂದು ನಡೆಯಲಿದ್ದು, ಈ ಎಲ್ಲದರ ಹಿನ್ನಲೆಯಲ್ಲಿ ಡಿಸೆಂಬರ್ ಮೂರನೇ ವಾರದಲ್ಲಿ ನಿಗಮ ಮಂಡಳಿ ಪುನರಚನೆ ಘೋಷಣೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

  ನಿಗಮ ಮಂಡಳಿಯಲ್ಲಿ ಜಿಲ್ಲೆಗೇನು ?:

  ಪ್ರಸ್ತುತ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷರಾಗಿ ಅನಂತ ಅಶೀಸರ, NWKSRTC ಅಧ್ಯಕ್ಷರಾಗಿ ವಿ.ಎಸ್ ಪಾಟೀಲ್, ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆಯ ರಾಜ್ಯ ವಿಕೇಂದ್ರೀಕರಣಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾಗಿ ಪ್ರಮೋದ ಹೆಗಡೆ ಅಧಿಕಾರದಲ್ಲಿದ್ದಾರೆ. ಜಿಲ್ಲೆಗೆ ಸಂಬಂಧಿಸಿ ಈ ಮೊದಲು ನಿಗಮ ಮಂಡಳಿ ರಚನೆಯಲ್ಲಿ ಕರಾವಳಿಯನ್ನು ಕಡೆಗಾಣಿಸಿದ್ದು ಹಾಗು ಸಾಮಾಜಿಕ ನ್ಯಾಯವನ್ನು ಪರಿಗಣಿಸದೇ ಇದ್ದಿದ್ದರ ಕುರಿತಾಗಿ ಕೆಲವೆಡೆ ಅಪಸ್ವರ ಕೇಳಿಬಂದಿತ್ತು.

  ಅಲುಗಾಡಿತಾ ಜೀವ ವೈವಿಧ್ಯ ಮಂಡಳಿ ?:
  ಪ್ರತಿ ಬಾರಿ ಯಡ್ಯೂರಪ್ಪ ನೇತೃತ್ವದ ಭಾಜಪಾ ಸರಕಾರ ಅಧಿಕಾರಕ್ಕೇರುತ್ತಲೇ, ಅನಂತ ಅಶೀಸರ ಹೆಸರು ನಿಗಮ ಮಂಡಳಿಯಲ್ಲಿ ಖಾಯಂ ಎಂಬುದು ಬಹುತೇಕರ ಮಾತು. ಆದರೆ ಪ್ರಸ್ತುತ ಬೊಮ್ಮಾಯಿ ನೇತೃತ್ವದ ಸರಕಾರದಲ್ಲಿ ಅಶೀಸರಗೆ ನಿಗಮ ಮಂಡಳಿ ಕೈತಪ್ಪುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗಿದ್ದು, ಆ ಸ್ಥಾನಕ್ಕೆ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಕೆ ಜಿ ನಾಯ್ಕ ಹೆಸರು ಕೇಳಿ ಬರುತ್ತಿದೆ. ಇತ್ತೀಚಿಗಷ್ಟೇ ಘೋಷಣೆಯಾದ ವಿಧಾನ ಪರಿಷತ್ ಟಿಕೆಟ್ ಅಪೇಕ್ಷಿತರ ಪಟ್ಟಿಯಲ್ಲಿಯೂ ಸಹ ಅವರ ಹೆಸರು ಮುಂಚೂಣಿಯಲ್ಲಿತ್ತು. ಆದರೆ ಕೊನೆಗಳಿಗೆಯಲ್ಲಿ ಕೈತಪ್ಪಿದೆ.

  ಜೀವ ವೈವಿಧ್ಯ ನಿಗಮ ಮಂಡಳಿ ನೇಮಕಕ್ಕೆ ವಿರೋಧ; ತೋಳ ಬಂತು ತೋಳ ಕಥೆ !

  300x250 AD

  ಯಡ್ಯೂರಪ್ಪ ನೇತೃತ್ವದಲ್ಲಿ ಸರಕಾರ ರಚನೆಯಾದಾಗ, ಅನಂತ ಅಶೀಸರಗೆ ನಿಗಮ ಮಂಡಳಿ ನೀಡಿದ್ದನ್ನು ಈ ಹಿಂದೆ ಕೆ.ಜಿ. ನಾಯ್ಕ ವಿರೋಧ ವ್ಯಕ್ತಪಡಿಸಿದ್ದು, ಈಗ ಪರಿಷತ್ ಟಿಕೆಟ್ ಸಹ ಕೈತಪ್ಪಿದ್ದು ಪ್ರತಿ ಬಾರಿ ಅವರ ಹೆಸರು ಮುಂಚೂಣಿಗೆ ತಲುಪಿ ಕೊನೆಗೆ ಅಂತಿಮ ಕ್ಷಣದಲ್ಲಿ ನಿರಾಸೆ ಮೂಡುತ್ತಿರುವುದು ತೋಳ ಬಂತು ತೋಳ ಕಥೆಯಂತಾಗಿರುವುದು ವಿಪರ್ಯಾಸ. ಇದೇ ವೇಳೆ ಜೀವ ವೈವಿಧ್ಯ ನಿಗಮ ಮಂಡಳಿಗೆ ಜಿಲ್ಲೆಯಿಂದ ಪ್ರಯತ್ನ ನಡೆಸುವಂತೆ ಇನ್ನೋರ್ವರಿಗೆ ತೀವ್ರ ಆಗ್ರಹ, ಬೆಂಬಲ ಇತ್ತು ಎಂಬ ಮಾಹಿತಿಯೂ ಬಲ್ಲ ಮೂಲಗಳಿಂದ ಇದೆ. ನಿಗಮ ಮಂಡಳಿ ಬದಲಾವಣೆ ಆಗುವುದಾದಲ್ಲಿ, ಎಲ್ಲರನ್ನೂ ಮೀರಿಸಿ ಜೀವ ವೈವಿಧ್ಯ ಮಂಡಳಿ ಕೆ ಜಿ ನಾಯ್ಕ ಪಾಲಾಯಿತೇ ಎಂದು ಕಾದು ನೋಡಬೇಕು !

  ಕಿರು ಅವಧಿಗೆ ನಿಗಮ ಮಂಡಳಿ; ಏರುವಷ್ಟರಲ್ಲಿ ಇಳಿಯಬೇಕು:

  ಮುಂದಿನ ವಿಧಾನಸಭೆ ಚುನಾವಣೆಗೆ ಇನ್ನು ಕೇವಲ ಒಂದೂವರೆ ವರ್ಷ ಮಾತ್ರ ಬಾಕಿ ಇದ್ದು, ಈಗ ನಿಗಮ ಮಂಡಳಿ ಪುನರಚನೆಯಾದರೆ ನೂತನ ಅಧ್ಯಕ್ಷರಿಗೆ ಕೇವಲ ಹತ್ತು ತಿಂಗಳ ಅಧಿಕಾರ ಸಿಗಬಹುದು. ಅಧಿಕಾರಕ್ಕೆ ಏರುವಷ್ಟರಲ್ಲಿ ಇಳಿಯಲು ಸಿದ್ಧರಾಗುವ ಅನಿವಾರ್ಯತೆ ಇರುತ್ತದೆ. ಈ ಕಾರಣಕ್ಕೆ ನಿಗಮ ಮಂಡಳಿ ಪುನರಚನೆ ನಡೆಯುತ್ತದೆಯೇ ಅಥವಾ ಈಗಿನದ್ದನ್ನೇ ಮುಂದುವರೆಸುತ್ತಾರ ಎಂಬುದು ಕುತೂಹಲದ ಪ್ರಶ್ನೆಯಾಗಿದೆ.

  ನಿಗಮ ಮಂಡಳಿ ಬಗ್ಗೆ ಕೆ.ಜಿ. ನಾಯ್ಕ ಏನಂತಾರೆ:

  ನಿಗಮ ಮಂಡಳಿ ಪುನರಚನೆ ಕುರಿತಾಗಿ ‘e – ಉತ್ತರ ಕನ್ನಡ’ದ ಜೊತೆ ಮಾತನಾಡಿದ ಕೆ. ಜಿ. ನಾಯ್ಕ ಹಣಜೀಬೈಲ್, ನಿಗಮ ಮಂಡಳಿಗೆ ನನ್ನ ಹೆಸರು ಪಕ್ಷದಿಂದ ನಾಮಿನೇಟ್ ಆಗಿರಬಹುದು. ನನಗೇನೂ ಮಾಹಿತಿಯಿಲ್ಲ. ವಿಧಾನ ಪರಿಷತ್ ಗೆ ಸಹ ಟಿಕೆಟ್ ಸಿಗುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ ಹಾಗಾಗಲಿಲ್ಲ. ಪ್ರತಿ ಬಾರಿಯೂ ಹೆಸರು ಅಂತಿಮ ಕ್ಷಣದಲ್ಲಿ ಕೈತಪ್ಪುತ್ತಿದೆ‌. ಆ ನಿಟ್ಟಿನಲ್ಲಿ ಯಾವುದೇ ಪದವಿ ಮೇಲೆ ನಿರೀಕ್ಷೆ ಇಲ್ಕದೇ, ಕಳೆದ 32 ವರ್ಷಗಳಿಂದ ಪಕ್ಷ ಸಂಘಟನೆಯಲ್ಲಿ ತೊಡಗಿದ್ದೇನೆ. ಈಗಲೂ ಸಹ ಪರಿಷತ್ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಗೆಲುವಿಗೆ ಓಡಾಡುತ್ತಿದ್ದೇನೆ’ ಎಂದರು.

  ಅನಂತ ಅಶೀಸರ ಅಧ್ಯಕ್ಷಗಿರಿಗೆ ಆತಂಕವಿಲ್ಲ:

  ಒಂದು ಮೂಲದ ಪ್ರಕಾರ ಅನಂತ ಅಶೀಸರಗೆ ನಿಗಮ ಮಂಡಳಿ ಕೈತಪ್ಪುತ್ತದೆ ಎಂಬ ಬಲವಾದ ಹೇಳಿಕೆಯಂತೆ, ಇನ್ನೊಂದು ಮೂಲದಿಂದಲೂ ಸಹ ಅಷ್ಟೇ ಪ್ರಬಲವಾಗಿ, ಅನಂತ ಅಶೀಸರ ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸುತ್ತಾರೆ. ಆ ವಿಷಯದಲ್ಲಿ ಆತಂಕ ಬೇಡ ಎಂಬ ವಿಶ್ವಾಸದ ಮಾತುಗಳೂ ಕೇಳಿಬರುತ್ತಿದೆ. ಆದರೆ ಡಿಸೆಂಬರ 15 ರ ವೇಳೆಗೆ ಈ ವಿಷಯಗಳು ಬಹುತೇಕ ಅಂತಿಮಗೊಳ್ಳಲಿದ್ದು, ಯಾರು ಅಧಿಕಾರ ಏರುತ್ತಾರೆ, ಯಾರು ಇಳಿಯುತ್ತಾರೆ ಎಂಬುದನ್ನು ಎದುರುನೋಡಬೇಕಿದೆ.

  Share This
  300x250 AD
  300x250 AD
  300x250 AD
  Leaderboard Ad
  Back to top