
ಕುಮಟಾ: ಲಾಕ್‍ಡೌನ್‍ನಿಂದ ಕಳೆದ ಮೂರು ತಿಂಗಳಿನಿಂದ ಸ್ಥಗಿತಗೊಂಡಿದ್ದ ಕೆಎಸ್‍ಆರ್‍ಟಿಸಿ ಬಸ್ ಸಂಚಾರವು ಆರಂಭಗೊಂಡಿದ್ದು, ಕುಮಟಾ ಬಸ್ ನಿಲ್ದಾಣದಿಂದ ಸೋಮವಾರ 7 ಪ್ರಮುಖ ಹಾಗೂ ಕೆಲ ಗ್ರಾಮೀಣ ಭಾಗಗಳಿಗೆ ಬಸ್ ಸಂಚರಿಸಿದೆ.
ಕೊರೊನಾ ಲಾಕ್‍ಡೌನ್ ಪರಿಣಾಮ ಸಾರಿಗೆ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತು. ಆದರೆ ಈಗ ಕೊರೊನಾ ನಿಯಂತ್ರಣಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಲಾಕ್‍ಡೌನ್ ಸಡಿಲಗೊಳಿಸಿದ್ದು, ಬಸ್ ಸಂಚಾರ ಆರಂಭಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕುಮಟಾ ಬಸ್ ನಿಲ್ದಾಣದಿಂದ ಪ್ರಮುಖವಾಗಿ ಕಾರವಾರ, ಅಂಕೋಲಾ, ಹೊನ್ನಾವರ, ಭಟ್ಕಳ, ಶಿರಸಿ, ಸಿದ್ದಾಪುರ ಹಾಗೂ ಗೇರುಸೊಪ್ಪ ಭಾಗಕ್ಕೆ ಬಸ್ ಸಂಚರಿಸಿದೆ. ಅಲ್ಲದೇ, ಗೋಕರ್ಣ, ಅಘನಾಶಿನಿ ಸೇರಿದಂತೆ ಕೆಲ ಗ್ರಾಮೀಣ ಪ್ರದೇಶಗಳಿಗೂ ಸಹ ಬಸ್ ಸಂಚಾರ ಪ್ರಾರಂಭಗೊಂಡಿದೆ.
ಇನ್ನು ಘಟಕದ ವ್ಯವಸ್ಥಾಪಕಿ ಸೌಮ್ಯ ನಾಯಕ ಮಾಹಿತಿ ನೀಡಿ, ಪ್ರಯಾಣಿಕರ ಸಂಖ್ಯೆಗನುಗುಣವಾಗಿ ಬಸ್ ಸಂಚಾರ ಆರಂಭಿಸಲಾಗಿದೆ. ಅವರ ಆದ್ಯತೆಯ ಮೇರೆಗೆ ಕೆಲ ಗ್ರಾಮೀಣ ಪ್ರದೇಶಗಳಿಗೂ ಬಸ್ ಸಂಚರಿಸಿದೆ ಎಂದ ಅವರು, ಪ್ರಯಾಣಿಕರು ಬಸ್‍ನಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಕೊರೊನಾ ನಿಯಮಾವಳಿ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು ಎಂದರು.