• Slide
    Slide
    Slide
    previous arrow
    next arrow
  • ಯಕ್ಷಗಾನ ಮನೋರಂಜನೆ ಜೊತೆ ಮನೋವಿಕಾಸದ ಕಾರ್ಯ ಮಾಡುತ್ತೆ; ಬಳಕೂರು ಕೃಷ್ಣಯಾಜಿ

    300x250 AD


    ಶಿರಸಿ: ಪ್ರಚಲಿತದಲ್ಲಿ ಇಲ್ಲದ ಪೌರಾಣಿಕ ಪ್ರಸಂಗಗಳ ಪ್ರದರ್ಶನ ಹೆಚ್ಚುವ ಅಗತ್ಯತೆ ಇಂದಿನ ಯಕ್ಷರಂಗದಲ್ಲಿದೆ ಎಂದು ಹಿರಿಯ ಯಕ್ಷಗಾನ ಕಲಾವಿದ ಬಳಕೂರು ಕೃಷ್ಣಯಾಜಿ ಹೇಳಿದರು.


    ನಗರದ ಟಿಎಂಎಸ್ ಸಭಾಂಗಣದಲ್ಲಿ ಭಾನುವಾರ ಹಿಲ್ಲೂರು ಯಕ್ಷಮಿತ್ರ ಬಳಗ ಉದ್ಘಾಟಿಸಿ ಅವರು ಮಾತನಾಡಿದರು. ಯಕ್ಷಗಾನ ಮೇಳವನ್ನೇ ನಂಬಿ ಬದುಕುವ ಕಲಾವಿದರಿಗೆ ಇಂದಿಗೂ ಸಾಕಷ್ಟು ಕಷ್ಟಗಳಿವೆ. ಇಂಥ ಸಂದರ್ಭದಲ್ಲಿ ಹಿಲ್ಲೂರು ಯಕ್ಷಮಿತ್ರ ಬಳಗ ಸ್ಥಾಪನೆಯಾಗಿದ್ದು ಕಾಲೋಚಿತ ಕಾರ್ಯವಾಗಿದೆ ಎಂದರು. ಯಕ್ಷಗಾನ ಮನೋರಂಜನೆಯಷ್ಟೇ ಅಲ್ಲ ಮನೋವಿಕಾಸದ ಕಾರ್ಯವನ್ನೂ ಮಾಡುತ್ತದೆ. ಅದಕ್ಕೆ ಪೂರಕವಾಗಿ ಇನ್ನೂ ಪ್ರಚಲಿತದಲ್ಲಿ ಇಲ್ಲದ ರಾಮಾಯಣ, ಮಹಾಭಾರತದ ಪೌರಾಣಿಕ ಆಖ್ಯಾನ ಪ್ರದರ್ಶನಗೊಂಡರೆ ಇನ್ನಷ್ಟು ಉತ್ತಮ ಫಲಿತಾಂಶ ಸಿಗುತ್ತದೆ ಎಂದರು.


    ಹುದುಗಿರುವ ಪ್ರತಿಭೆಗಳು ಇಂಥ ಸಂಸ್ಥೆಗಳ ಮೂಲಕ ಹೊರ ಬರಬೇಕು. ಜತೆ, ಕಷ್ಟದಲ್ಲಿರುವ ಯಕ್ಷ ಕಲಾವಿದರಿಗೆ ಆರ್ಥಿಕ ಸಹಾಯ ಮಾಡುವ ಕಾರ್ಯ ಆಗಬೇಕು ಎಂದರು. ಯಕ್ಷಗಾನ ಅನೌಪಚಾರಿಕ ವಿಶ್ವವಿದ್ಯಾಲಯವಾಗಿದ್ದು, ಈ ಕಲೆಯನ್ನು ಇನ್ನಷ್ಟು ಎತ್ತರಿಸುವ ಜತೆ ಕಲಾವಿದರನ್ನೂ ಉಳಿಸಿ ಬೆಳೆಸುವ ಕಾರ್ಯ ಆಗಬೇಕು ಎಂದರು.


    ಹಿಲ್ಲೂರು ಯಕ್ಷಮಿತ್ರ ಬಳಗದ ಮುಖ್ಯಸ್ಥ ರಾಮಕೃಷ್ಣ ಹೆಗಡೆ ಹಿಲ್ಲೂರು ಪ್ರಾಸ್ತಾವಿಕ ಮಾತನಾಡಿ, ಯಕ್ಷಗಾನದ ಜತೆ ಯಕ್ಷಗಾನೇತರ ಕಲೆಗಳ ಶ್ರೆಯೋಭಿವೃದ್ಧಿಗೆ ಸಂಸ್ಥೆ ಶ್ರಮಿಸಲಿದೆ ಎಂದರು. ಯಕ್ಷಗಾನ ಕಲಾವಿದ ಸಮಾಜದ ಆಸ್ತಿಯೂ ಹೌದು ಹಾಗಾಗಿ ಆತ ಸಮಾಜಮುಖಿ ಕಾರ್ಯವನ್ನೂ ಮಾಡಬೇಕು. ಅದೇ ರೀತಿ ಹಿಲ್ಲೂರು ಯಕ್ಷಮಿತ್ರ ಬಳಗ ಕೂಡ ಸಾಮಾಜಿಕ ಕಾರ್ಯ ಮಾಡಲಿದೆ ಎಂದರು.

    300x250 AD


    ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಯಲ್ಲಾಪುರ ಟಿಎಂಎಸ್ ಉಪಾಧ್ಯಕ್ಷ ನರಸಿಂಹ ಕೋಣೆಮನೆ, ಉದ್ಯಮಿ ಉಪೇಂದ್ರ ಪೈ, ಹಿರಿಯ ಭಾಗವತ ಸುರೇಶ ಶೆಟ್ಟಿ ಎಸ್ ಇದ್ದರು. ಟಿಎಂಎಸ್ ಅಧ್ಯಕ್ಷ ಜಿ.ಎಂ.ಹೆಗಡೆ ಹುಳಗೋಳ ಅಧ್ಯಕ್ಷತೆ ವಹಿಸಿದ್ದರು. ಬಳಗದ ಪದಾಧಿಕಾರಿ ರಮ್ಯಾ ಹೆಗಡೆ ಸ್ವಾಗತಿಸಿದರು. ನಾಗರಾಜ ಜೋಶಿ ನಿರೂಪಿಸಿದರು.


    ಸಭಾ ಕಾರ್ಯಕ್ರಮ ನಂತರ ವೀರಮಣಿ ಕಾಳಗ ಯಕ್ಷಗಾನ ಪ್ರದರ್ಶನಗೊಂಡಿತು. ಹಿಮ್ಮೇಳದಲ್ಲಿ ಸುರೇಶ ಶೆಟ್ಟಿ, ರಾಮಕೃಷ್ಣ ಹೆಗಡೆ ಹಿಲ್ಲೂರು, ಮದ್ದಳೆಯಲ್ಲಿ ಪರಮೇಶ್ವರ ಭಂಡಾರಿ, ಅನಿರುದ್ಧ ಹೆಗಡೆ, ಚಂಡೆಯಲ್ಲಿ ಪ್ರಸನ್ನ ಹೆಗ್ಗಾರು, ಮುಮ್ಮೇಳದಲ್ಲಿ ಕೃಷ್ಣಯಾಜಿ ಬಳಕೂರು, ಗಣಪತಿ ಹೆಗಡೆ ತೋಟಿಮನೆ, ಶಂಕರ ಹೆಗಡೆ ನೀಲ್ಕೋಡು, ಪ್ರಸನ್ನ ಶೆಟ್ಟಿಗಾರ ಮಂದರ್ತಿ, ಮಹಾಬಲೇಶ್ವರ ಗೌಡ, ರಾಜೇಶ ಭಂಡಾರಿ, ಚಂದ್ರಹಾಸ ಗೌಡ ಪ್ರದರ್ಶನ ನೀಡಿದರು

    Share This
    300x250 AD
    300x250 AD
    300x250 AD
    Leaderboard Ad
    Back to top