ಮುಂಡಗೋಡ: ತಾಲೂಕಿನ ಕರಗಿನಕೊಪ್ಪ ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕಲುಷಿತ ನೀರು ಕುಡಿದ ಪರಿಣಾಮ ಮಕ್ಕಳಿಗೆ ತಲೆನೋವು, ಹೊಟ್ಟೆನೋವು ಹಾಗೂ ವಾಂತಿ ಕಾಣಿಸಿಕೊಂಡು ಒಂಬತ್ತು ವಿದ್ಯಾರ್ಥಿಗಳಿಗೆ ವಾಂತಿ, ತಲೆನೋವು ಹಾಗೂ ಹೊಟ್ಟೆನೋವು ಕಾಣಿಸಿಕೊಂಡು ತಾಲೂಕು ಆಸ್ಪತ್ರೆಗೆ ದಾಖಲಾಗಿ ಗುಣಮುಖರಾದ ಘಟನೆ ಜರುಗಿದೆ.
ಎಂದಿನಂತೆಯೆ ಎಲ್ಲ ವಿದ್ಯಾರ್ಥಿಗಳು ಊಟ ಮಾಡಿ ತಮ್ಮ ಕೊಠಡಿಗೆ ತೆರಳಿದ್ದರು. ಏಳು ಹಾಗೂ ಎಂಟನೆಯ ತರಗತಿಯ ವಿದ್ಯಾರ್ಥಿಗಳಾದ ಕೇಶವ್, ನಿವೇದಿತಾ, ರೇಖಾ, ಶೀಲಾ ಆರ್.ಲಮಾಣಿ, ಸಂಗೀತಾ, ತ್ರೀವ್ರ ಕೌಜಲಗಿ, ಶೀಲಾ ಎಸ್.ಲಮಾಣಿ, ಸುಮಾ ಲಮಾಣಿ, ಭವಾನಿ ಎಂಬ ವಿದ್ಯಾರ್ಥಿಗಳಿಗೆ ವಾಂತಿ ಆರಂಭವಾದರೆ ಮತ್ತೆ ಕೆಲವರಿಗೆ ತಲೆನೋವು ಹಾಗೂ ಹೊಟ್ಟೆನೋವು ಆರಂಭವಾಗಿದೆ.
ವಿದ್ಯಾರ್ಥಿಗಳ ಅನಾರೋಗ್ಯದ ವಿಷಯ ತಿಳಿದ ಶಾಲೆಯ ನರ್ಸ, ವಿದ್ಯಾರ್ಥಿಗಳನ್ನು ರಾತ್ರಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಚಿಕಿತ್ಸೆ ಪಡೆದ ವಿದ್ಯಾರ್ಥಿಗಳಲ್ಲಿ ಎಂಟು ಜನರು ಗುಣಮುಖರಾಗಿ ಶಾಲೆಗೆ ತೆರಳಿದರೆ ಮತ್ತೊಬ್ಬ ವಿದ್ಯಾರ್ಥಿನಿ ಆಸ್ಪತ್ರೆಯಲ್ಲಿಯೆ ಚಿಕಿತ್ಸೆ ಪಡೆಯುತ್ತಿದ್ದು ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾಳೆ.
ಮಾನವೀಯತೆ ಇಲ್ಲದ ಶಿಕ್ಷಕರು: ರಾತ್ರಿ ಒಂಬತ್ತು ಮಕ್ಕಳಿಗೆ ಅನಾರೋಗ್ಯ ಕಾಣಿಸಿಕೊಂಡರು ಕೊಠಡಿಯಲ್ಲಿದ್ದ ಶಿಕ್ಷಕರು ಮಕ್ಕಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಮುಂದೆ ಬರಲಿಲ್ಲ. ಶಾಲೆಯಲ್ಲಿನ ನರ್ಸ ಒಬ್ಬರೆ ಒಂಬತ್ತು ಮಕ್ಕಳನ್ನು ಕರೆದುಕೊಂಡು ಸರಕಾರಿ ಆಸ್ಪತ್ರೆಗೆ ಹೋಗಿದ್ದಾರೆ. ಮಕ್ಕಳ ಆರೋಗ್ಯದ ಬಗ್ಗೆ ಗಮನ ಹರಿಸದೆ ನಿರ್ಲಕ್ಷ ವಹಿಸಿ ಅಮಾನವೀಯತೆ ಮರೆತಿದ್ದಾರೆ ಎಂದು ಪಾಲಕರು ಆಕ್ರೋಶಕ್ಕೆ ವ್ಯಕ್ತ ಪಡಿಸಿದ್ದಾರೆ.
ಒಂದು ದಿನ ಊಟದಲ್ಲಿ ಹುಳ: ಸಮರ್ಪಕವಾಗಿ ಸ್ವಚ್ಛತೆ ಮಾಡದೆ ಅಡುಗೆ ಮಾಡಿ ನೀಡಿದ್ದರಿಂದ ಊಟದಲ್ಲಿ ಹುಳುಗಳು ಬಂದಿದ್ದವು ಅದಾದ ನಂತರ ಊಟ ಸರಿಯಾಗಿ ನೀಡುತ್ತಿದ್ದಾರೆ ಎಂದು ಶಾಲಾ ವಿದ್ಯಾರ್ಥಿಗಳು ತಿಳಿಸಿದ್ದಾರೆ.
ಪ್ರಾಂಶುಪಾಲ ಹಾಗೂ ವಾರ್ಡನವಿಲ್ಲ: ಪ್ರಾಂಶುಪಾಲರು ವರ್ಗವಾಗಿ ಹೋಗಿ ಹಲವು ತಿಂಗಳು ಉರುಳಿದ್ದು ಬೇರೆ ಪ್ರಾಂಶುಪಾಲರು ಇಲ್ಲಿಗೆ ಬಂದಿಲ್ಲ. ಈ ಶಾಲೆಯ ಶಿಕ್ಷಕರು ಪ್ರಾಂಶುಪಾಲ ಹುದ್ದೆ ನಿಭಾಯಿಸಲು ಹಿಂದೇಟು ಹಾಕುತ್ತಿದ್ದಾರೆ. ಹಿರಿಯ ಅಧಿಕಾರಿಗಳು ಗಮನ ಹರಿಸಿ ಸೂಕ್ತ ಕ್ರಮ ಜರುಗಿಸಬೇಕಿದೆ. ಜೊತೆಗೆ ವಾರ್ಡನ್ ಹುದ್ದೆಯೂ ಸಹ ಖಾಲಿಯಿದ್ದು ಬೇರೆ ಶಿಕ್ಷಕರು ಸದ್ಯ ನಿಬಾಯಿಸುತ್ತಿದ್ದಾರೆ.
ಶುದ್ದ ಕುಡಿಯುವ ನೀರಿನ ಘಟಕವಿಲ್ಲ: ಶಾಲೆಗೆ ಶುದ್ದ ಕುಡಿಯುವ ನೀರಿನ ಘಟಕ ಮಂಜೂರಿಯಾಗಿದೆ. ಆದರೆ ಅದನ್ನು ಇದೂವರೆಗೂ ಅನುಷ್ಠಾನಗೊಳಿಸಿಲ್ಲ. ಶುದ್ದ ಕುಡಿಯುವ ನೀರಿನ ಘಟಕದ ಸಾಮಗ್ರಿಗಳನ್ನು ತಂದು ಇಡಲಾಗಿದೆ. ಆದರೆ ಜೋಡಣೆ ಮಾಡಿ ವಿದ್ಯಾರ್ಥಿಗಳ ಬಳಕೆಗೆ ನೀಡದಿರುವುದರಿಂದ ಮಕ್ಕಳಿಗೆ ಕುಡಿಯಲು ಶುದ್ದ ನೀರು ಸಿಗದಂತಾಗಿದೆ. ಕೂಡಲೆ ಸಾಮಗ್ರಿಗಳನ್ನು ಜೋಡಿಸಿ ಶುದ್ದ ಕುಡಿಯುವ ನೀರು ಮಕ್ಕಳಿಗೆ ಸಿಗುವಂತಾಗಬೇಕು.
ಪಾಲಕರಿಂದ ತಹಸೀಲ್ದಾರ್‍ಗೆ ದೂರು: ಶಾಲೆಯಲ್ಲಿನ ಸಮಸ್ಯೆಗಳ ಕುರಿತು ಹಾಗೂ ಊಟದಲ್ಲಿ ಹುಳಗಳು ಬಂದಿರುವ ಬಗ್ಗೆ ಪಾಲಕರು ತಹಸೀಲ್ದಾರ್‍ಗೆ ಮನವಿ ಸಲ್ಲಿಸಿದ್ದರು. ಮಕ್ಕಳಿಗೆ ಆಗುತ್ತೀರುವ ತೊಂದರೆಯ ಬಗ್ಗೆ ಅಧಿಕಾರಿಗಳ ಗಮನ ಸೇಳೆದಿದ್ದರು. ಇದಾದ ಕೆಲವೆ ಗಂಟೆಗಳಲ್ಲಿ ಮಕ್ಕಳ ಆರೋಗ್ಯ ಸಮಸ್ಯೆ ಎದುರಾಗಿರುವುದು ಪಾಲಕರ ಆಕ್ರೋಶ ಮತ್ತಷ್ಟು ಹೆಚ್ಚಿಸಿದೆ.
ವಿಜ್ಞಾನ ವಿಭಾಗದಲ್ಲಿ ಕಲಿಕೆಗೆ ಲ್ಯಾಬ್‍ನಲ್ಲಿ ಯಾವೂದೆ ಉಪಕರಣಗಳಿಲ್ಲ ಹಾಗೂ ಬಟ್ಟೆ ಪುಸ್ತಕ ಇದೂವರೆಗೂ ನೀಡಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದರು.
ವಾರ್ಡನ್ ವಿಶ್ವನಾಥ ಹಿರೇಮಠ: ಊಟದಲ್ಲಿ ಹುಳ ಬಂದಿದ್ದು ನೀಜಾ ವಿದ್ಯಾರ್ಥಿಗಳು ನಮ್ಮ ಗಮನಕ್ಕೆ ತಂದರು ಅಡುಗೆಯವರಿಗೆ ಸೂಚನೆ ನೀಡಿ ಸಮರ್ಪಕವಾಗಿ ಸ್ವಚ್ಛತೆ ಮಾಡಿ ಅಡುಗೆ ತಯಾರಿಸುವಂತೆ ಸೂಚಿಸಿದ್ದೆನೆ ನಾನು ಕಾರವಾರಕ್ಕೆ ಕಚೇರಿಯ ಸಭೆಗೆ ತೆರಳಿದ್ದು ಆ ವೇಳೆಯಲ್ಲಿ ಮಕ್ಕಳಿಗೆ ಆರೋಗ್ಯ ಸಮಸ್ಯೆಯ ಬಗ್ಗೆ ನನಗೆ ಬೆಳಗ್ಗೆ ತಿಳಿಯು ಎಂದರು.
ಪಟ್ಟಣ ಪಂಚಾಯತ ಮಾಜಿ ಅಧ್ಯಕ್ಷ ಕಿರಣ ಶೇರಖಾನೆ; ಹಾಸ್ಟೇಲ್‍ನ ವಿದ್ಯಾರ್ಥಿಗಳು ಅಸ್ಪಸ್ಥಗೊಂಡು ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಇಲ್ಲಿ ಪ್ರಾಂಶುಪಾಲ ಹಾಗೂ ವಾರ್ಡನ್‍ಗಳಿಲ್ಲದೆ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆ ಉಂಟಾಗಿದೆ ಎಂದರು.
ತಾಲೂಕು ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಎಚ್.ಎಫ್.ಇಂಗಳೆ: ಕುಡಿಯುವ ನೀರಿನ್ನು ಶುದ್ದಗೊಳಿಸುವ ಉದ್ದೇಶದಿಂದ ಶಾಲೆಯವರು ನೀರಿನ ಟ್ಯಾಂಕ್‍ಗೆ ಕ್ಲೋರಿನ್ ಪೌಡರ ಹಾಕಿದ್ದು ಈ ನೀರನ್ನು ಕುಡಿದ ಕೆಲ ಮಕ್ಕಳಿಗೆ ಆರೊಗ್ಯ ಸಮಸ್ಯೆಯಾಗಿದ್ದು ಚಿಕಿತ್ಸೆ ಪಡೆದು ಎಲ್ಲ ಮಕ್ಕಳು ಗುಣಮುಖರಾಗಿ ಶಾಲೆಗೆ ತೆರಳಿದ್ದಾರೆ.