ಶಿರಸಿ: ನಗರದ ಯೂತ್ ಫಾರ್ ಸೇವಾ ಸಂಸ್ಥೆಯ ಸ್ವಯಂಸೇವಕಿ(ವಾಲಂಟಿಯರ್) ಗಾಂಧಿನಗರದ ಸ್ವಾತಿ ನಾಯ್ಕ ತನ್ನ ಜನ್ಮದಿನದಂದು ನೇತ್ರದಾನ ಮಾಡುವ ನಿರ್ಧಾರ ಮಾಡಿ ಗಣೇಶ ನೇತ್ರಾಲಯದ ಡಾ. ಕೆ.ವಿ ಶಿವರಾಮ ಮತ್ತು ಲಯನ್ಸ್ ನೇತ್ರ ಭಂಢಾರದ ಡಾ. ವಿಶ್ವನಾಥ ಅಂಕದ ಅವರ ಸಮ್ಮುಖದಲ್ಲಿ ನೇತ್ರದಾನದ ಶಪಥ ಫಾರಂ ಭರ್ತಿ ಮಾಡಿ ಡಾ.ಕೆ.ವಿ ಶಿವರಾಮ ಅವರಿಗೆ ಹಸ್ತಾಂತರ ಮಾಡಿ ಮಾದರಿಯಾಗಿದ್ದಾರೆ.
ಯೂತ್ ಫಾರ್ ಸೇವಾದ ನೇತ್ರದಾನದ ಜಾಗೃತಿ ಅಭಿಯಾನದಲ್ಲಿ ಪಾಲ್ಗೊಂಡಾಗ ತನ್ನ ಕಣ್ಣು ಕೂಡಾ ಅಂಧರ ಬಾಳಿಗೆ ಬೆಳಕಗಾಗಲಿ ಎಂಬ ಆಶಯದಿಂದ ತಾನು ಕೂಡಾ ನೇತ್ರದಾನ ಮಾಡಲು ಪ್ರೇರಣೆಯಾಯಿತೆಂದು ತಿಳಿಸುತ್ತಾರೆ.
ಸಂಗೀತದಲ್ಲಿ ವಿದ್ವತ್ ಮಾಡುತ್ತಿರುವ ಮತ್ತು ಫ್ಯಾಷನ್ ಡಿಸೈನ್ ಹಾಗೂ ಬಿ.ಕಾಂ ಮಾಡಿರುವ ಕು.ಸ್ವಾತಿ ಕಳೆದ 5 ವರ್ಷದಿಂದ ಯೂತ್ ಫಾರ್ ಸೇವಾ ಸ್ವಯಂಸೇವಕಿಯಾಗಿ ಪರಿಸರ ಗೀತೆ ಅಭಿಯಾನ ಮತ್ತು ಹಸಿರು ಪಯಣ ಶಿಬಿರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕು.ಸ್ವಾತಿ ನಾಯ್ಕ ಮಾರಿಕಾಂಭಾ ಪದವಿ ಪೂರ್ವ ಕಾಲೇಜಿನ ವಿಜ್ಞಾನ ಉಪನ್ಯಾಸಕ ನಾಗರಾಜ ನಾಯ್ಕ ಮತ್ತು ಭಾರತಿ ನಾಯ್ಕ ಅವರ ಪುತ್ರಿಯಾಗಿದ್ದಾಳೆ.