ಮುಂಡಗೋಡ: ರಾಜ್ಯ ಮತ್ತು ಕೇಂದ್ರದಲ್ಲಿ ನಮ್ಮದೆ ಸರ್ಕಾರ ಇರುವಾಗ ನಮ್ಮ ಪಕ್ಷದ ಅಭ್ಯರ್ಥಿ ಚುನಾವಣೆಯಲ್ಲಿ ಗೆಲ್ಲುವುದು ನಮಗೆ ಮುಖ್ಯವಾಗಿದೆ. ನಮ್ಮನ್ನು ಗೆಲ್ಲಿಸಿ ಉನ್ನತ ಸ್ಥಾನಕ್ಕೆ ಕಳುಹಿಸಿರುವ ನನ್ನ ಕ್ಷೇತ್ರದ ಮತದಾರರಿಗೆ ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು.
ತಾಲೂಕಿನ ಚವಡಳ್ಳಿ ಗ್ರಾಮದಲ್ಲಿ ಗ್ರಾ.ಪಂ.ಪಂಚಾಯಿತಿ ಸದಸ್ಯರು ಹಾಗೂ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು. ಗಣಪತಿ ಉಳ್ವೇಕರ ಅಹಂಕಾರವಿಲ್ಲದ ವ್ಯಕ್ತಿ. ನಮ್ಮ ಕಂಪನಿಯಲ್ಲಿ ಕೆಲಸ ಮಾಡಿದವರು. ನಾಲ್ಕೈದು ಬಾರಿ ಕಾರವಾರ ನಗರಸಭೆ ಸದಸ್ಯರು ಹಾಗೂ ಎರಡು ಬಾರಿ ಕಾರವಾರ ನಗರಸಭೆ ಅಧ್ಯಕ್ಷರು ಆಗಿದ್ದರು. ಅವರನ್ನು ನಾವು ಈ ಬಾರಿ ಚುನಾವಣೆಯಲ್ಲಿ ಗೆಲ್ಲಿಸಬೇಕಾಗಿದೆ. ಮುಂಬರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಅತಿಯಾದ ಆತ್ಮವಿಶ್ವಾಸ ತೋರಬಾರದು ತುಂಬಾ ಜಾಗೃತೆಯಿಂದ ಗ್ರಾ.ಪಂ.ಸದಸ್ಯರಿಂದ ಮತದಾನ ಮಾಡಿಸಬೇಕು ಮುಂದಿನ ದಿನಗಳಲ್ಲಿ ಬೇರೆ ಪಕ್ಷದ ಅಭ್ಯರ್ಥಿಗಳು ತಮ್ಮ ಬಳಿ ಬಂದು ಜಾತಿ-ಭೇದದ ಮಾತುಗಳನ್ನಾಡಿ ಮನವೊಲಿಸಲು ಯತ್ನಿಸುತ್ತಾರೆ ಅದಕ್ಕೆ ತಲೆ ಕೆಡಿಸಿಕೊಳ್ಳಬೇಡಿ. ಅವರು ಚುನಾವಣೆ ಮುಗಿದ ಮೇಲೆ ಹೊರಟು ಹೋಗುತ್ತಾರೆ ಎಂದರು.
ವಿಧಾನಪರಿಷತ್ ಅಭ್ಯರ್ಥಿ ಗಣಪತಿ ಉಳ್ವೇಕರ್ ಮಾತನಾಡಿ, ಹಿಂದಿನ ವಿಧಾನಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಿ 1005 ಮತ ಪಡೆದಿದ್ದೆ. ಆಗ ಬಿಜೆಪಿ ಸರ್ಕಾರ ಇರಲಿಲ್ಲ ಆದರೆ ಈಗ ಕಾಲ ಬದಲಾಗಿದೆ. ನಾನು ಗೆಲ್ಲಲು ಅವಕಾಶವಿದ್ದರೂ ಸುಮ್ಮನೆ ಕುಳಿತುಕೊಳ್ಳುವ ಹಾಗಿಲ್ಲ. ತಾವು ನನಗೆ ಮತ ನೀಡಿ ನಾನು ವಿಧಾನಪರಿಷತ್‍ಗೆ ಆಯ್ಕೆಯಾದರೆ ಈ ಜಿಲ್ಲೆಯ ಅಭಿವೃದ್ಧಿಗೆ ಸಚಿವರ ಜತೆಗಿರುತ್ತೇನೆ. ಈ ಬಾರಿ ಪಕ್ಷ ನನ್ನನ್ನು ಗುರುತಿಸಿ ಮತ್ತೊಮ್ಮೆ ಚುನಾವಣೆಗೆ ಅವಕಾಶ ನೀಡಿದೆ. ನಮ್ಮ ಜಿಲ್ಲೆಯ ಪಂಚಾಯಿತಿಗಳಲ್ಲಿ ಬಿಜೆಪಿ ಪಕ್ಷದ ಬೆಂಬಲಿತ ಆಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ನನ್ನನ್ನು ಬಹುಮತಗಳಿಂದ ಗೆಲ್ಲಿಸಬೇಕಾಗಿದೆ. ನಾನು ನಗರಸಭೆ ಅಧ್ಯಕ್ಷನಾಗಿದ್ದಾಗ ಕಾರವಾರಕ್ಕೆ ಹೆಚ್ಚಿನ ಅನುದಾನ ತಂದಿದ್ದೇನೆ. ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದೇನೆ. ನಿಮ್ಮೆಲ್ಲರ ಧ್ವನಿಯಾಗಿ ವಿಧಾನಪರಿಷತ್‍ನಲ್ಲಿ ನಿಲ್ಲಲಿದ್ದೇನೆ. ಆದ್ದರಿಂದ ತಮ್ಮ ಅಮೂಲ್ಯ ಮತ ನೀಡಬೇಕು ಎಂದು ವಿನಂತಿಸಿಕೊಂಡರು.
ವಾಕರಸಾ ಸಂಸ್ಥೆ ಅಧ್ಯಕ್ಷ ವಿ.ಎಸ್.ಪಾಟೀಲ, ಬಿಜೆಪಿ ತಾಲೂಕು ಅಧ್ಯಕ್ಷ ನಾಗಭೂಷಣ ಹಾವಣಗಿ, ಎಲ್.ಟಿ.ಪಾಟೀಲ, ರವಿಗೌಡ ಪಾಟೀಲ, ಉಮೇಶ ಬಿಜಾಪುರ, ದೇವು ಪಾಟೀಲ, ಗುಡ್ಡಪ್ಪ ಕಾತೂರ ಇತರರಿದ್ದರು.