ಅಂಕೋಲಾ: ಮನೆಯಲ್ಲಿ ಶಾರ್ಟ್‍ಸರ್ಕೀಟ್ ನಿಂದ ಉಂಟಾಗುತ್ತಿದ್ದ ಭಾರೀ ಅನಾಹುತವನ್ನು ಬಾಲಕಿ ಶ್ರೀಲಕ್ಷ್ಮೀ ಸೂಕ್ತ ಸಮಯದಲ್ಲಿ ಸಮಯ ಪ್ರಜ್ಞೆಯಿಂದ ತಪ್ಪಿಸಿದ್ದಾಳೆ. ಆಕೆಯ ಜಾಣತನ ನೋಡಿ ಇಲ್ಲಿನ ಮಂಜಗುಣಿಯ ಅಪ್ಪ-ಅಮ್ಮ ಸೇವಾ ಸಂಸ್ಥೆಯ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.
ಶ್ರೀಲಕ್ಷ್ಮೀ ನಾಗರಾಜ ಜಾಂಬಳೇಕರ ಪಿ.ಎಮ್ ಆಂಗ್ಲ ಮಾಧ್ಯಮಿಕ ಪ್ರೌಢಶಾಲೆಯ 8ನೇ ತರಗತಿ ವಿದ್ಯಾರ್ಥಿನಿಯಾಗಿದ್ದಾಳೆ. ಈ ಸಂದರ್ಭದಲ್ಲಿ ಪಿ.ಎಮ್.ಹೈಸ್ಕೂಲಿನ ಮುಖ್ಯಾಧ್ಯಾಪಕ ಎಮ್.ಎ.ನಾಯ್ಕ ಮಾತನಾಡಿ, ಬದುಕಿಗೆ ಸಮಯ ಪ್ರಜ್ಞೆ ಬಹಳ ಮಹತ್ವದ್ದು. ವಿದ್ಯಾರ್ಥಿಗಳು ಅದನ್ನು ರೂಢಿಸಿಕೊಳ್ಳಬೇಕೆಂದರು. ಅಪ್ಪ-ಅಮ್ಮ ಸೇವಾ ಸಂಸ್ಥೆಯಿಂದ ಬಾಲಕಿಗೆ ಸನ್ಮಾನಿಸಿರುವುದು ತುಂಬಾ ಸಂತೋಷದ ಸಂಗತಿಯೆಂದರು.
ಈ ಸಂದರ್ಭದಲ್ಲಿ ಸೇವಾ ಸಂಸ್ಥೆಯ ಸಂಚಾಲಕ ಜಿ.ಆರ್.ತಾಂಡೇಲ ಪ್ರಾಸ್ತಾವಿಕ ಮಾತನಾಡಿ, ಸರ್ವರನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ಪ್ರಕಾಶ ಕುಂಜಿ, ಶಿಕ್ಷಕಿ ನಯನಾ ನಾಯಕ ಶಿಕ್ಷಕರಾದ ವಿ.ಎಮ್.ನಾಯ್ಕ, ಪ್ರವೀಣ ಆಗೇರ, ದಿನಕರ ನಾಯ್ಕ, ಶಿಕ್ಷಕಿ ಸವಿತಾ ಪಿ.ಟಿ. ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.