ಶಿರಸಿ: ಸಿದ್ದಾಪುರದ ಶ್ರೀ ಅನಂತ ಯಕ್ಷಕಲಾ ಪ್ರತಿಷ್ಠಾನವು ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಹಮ್ಮಿಕೊಂಡ ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ಪಂಚಭೂತಗಳ ಶುದ್ದಿಗೆ ಭಗವಾನ್ ಶ್ರೀಕೃಷ್ಣ ಮಾಡಿದ ಕೈಂಕರ್ಯಗಳ ಗಾಥೆಯು ಪಂಚ ಪಾವನ ಕಥಾದಲ್ಲಿ ಬಿಚ್ಚಿಕೊಂಡಿತು.
ಕಾರ್ತೀಕ ಶನಿವಾರದ ಹಿನ್ನಲೆಯಲ್ಲಿ ತಾಲೂಕಿನ ಕೊಳಗಿಬೀಸ್ ಮಾರುತಿ ದೇವಸ್ಥಾನದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೆÇ್ರೀ. ಎಂ. ಎ. ಹೆಗಡೆ ಅವರ ಸಾಹಿತ್ಯದ ವಿಶ್ವ ಶಾಂತಿ ಸರಣಿಯ ಯಕ್ಷನೃತ್ಯ ಒಂದು ತಾಸುಗಳ ಕಾಲ ಪ್ರೇಕ್ಷಕರ ಗಮನ ಸೆಳೆಯಿತು.
ಕು. ತುಳಸಿ ಹೆಗಡೆ ಏಕವ್ಯಕ್ತಿ ಮುಮ್ಮೇಳದಲ್ಲಿದ್ದರೆ ಭಾಗವತರಾಗಿ ಕೇಶವ ಹೆಗಡೆ ಕೊಳಗಿ, ಮದ್ದಲೆಯಲ್ಲಿ ಮಂಜುನಾಥ ಗುಡ್ಡೆದಿಂಬ, ಚಂಡೆಯಲ್ಲಿ ವಿಘ್ನೇಶ್ವರ ಗೌಡ, ಪ್ರಸಾದನದಲ್ಲಿ ವೆಂಕಟೇಶ ಬೊಗ್ರಿಮಕ್ಕಿ ರೂಪಕ ಕಟ್ಟಿಕೊಟ್ಟರು.
ಇದಕ್ಕೂ ಮೊದಲು ವಲಯ ಅರಣ್ಯಾಧಿಕಾರಿ ಪವಿತ್ರ ಯು.ಜೆ ಚಂಡೆ ನುಡಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ವಿಶ್ವಶಾಂತಿಗೆ ಯಕ್ಷ ನೃತ್ಯದ ಮೂಲಕ ವಿಶೇಷ ಸಂದೇಶ ಸಾರುತ್ತಿರುವದು ಖುಷಿಯಾಗುತ್ತದೆ. ಇಂಥ ಪ್ರಯೋಗಗಳು ಹೆಚ್ಚಲಿ ಎಂದರು.
ನಿವೃತ್ತ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಹಣಾಧಿಕಾರಿ ಎಂ.ಎಸ್.ಜೋಶಿ ಮಾತನಾಡಿ, ಯಕ್ಷಗಾನ ತನ್ನ ವ್ಯಾಪ್ತಿ ಹೆಚ್ಚಿಸಿಕೊಳ್ಳಲಿ. ಸರಕಾರ ಕೂಡ ಯಕ್ಷಗಾನ ಕಲಾವಿದರಿಗೆ ನೆರವು ನೀಡಬೇಕು ಎಂದರು.
ಕರೂರು ಸೀಮಾ ಅಧ್ಯಕ್ಷ ಉಮಾಪತಿ ಭಟ್ಟ ಮತ್ತಿಗಾರ, ದೇವಸ್ಥಾನದ ಪ್ರಧಾನ ಅರ್ಚಕ ವಿ.ಕುಮಾರ ಭಟ್ಟ, ಇತರರು ಇದ್ದರು. ಮಹೇಶ ಹೆಗಡೆ ಕೊಳಗಿ ಪ್ರಾರ್ಥಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ಕೇಶವ ಹೆಗಡೆ ಕೊಳಗಿ ಸ್ವಾಗತಿಸಿದರು. ಶ್ರೀಧರ ಭಟ್ಟ ಕೊಳಗಿಬೀಸ್ ವಂದಿಸಿದರು.