ಶಿರಸಿ: ದೇಶದ ಚಿಂತನೆ ಮಾಡುವುದರ ಜತೆಗೆ ನಮ್ಮ ಸುತ್ತಮುತ್ತ ನಡೆಯುವ ಅಪರಾಧ ಕೃತ್ಯದ ಬಗ್ಗೆ ಮಾಹಿತಿ ನೀಡಿದರೆ ಅಪರಾಧ ತಡೆ ಸುಲಭವಾಗುತ್ತದೆ ಎಂದು ಪಿಎಸ್‌ಐ ಈರಣ್ಣ ಹೇಳಿದರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಂವಿಧಾನ ದಿವಸ್ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಪರಾಧ ತಡೆಯುವುದು ಎಲ್ಲರ ಜವಾಬ್ದಾರಿ, ಬ್ಯಾಂಕ್, ಸೈಬರ್ ಅಪರಾಧದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವುದು, ಯುವ ಜನಾಂಗವನ್ನು ಕಾಡುವ ಮಾದಕ ದ್ರವ್ಯ ಸೇವನೆ ತಡೆಯಲು ವಿದ್ಯಾರ್ಥಿಗಳಿಂದ ಮಾತ್ರ ಸಾಧ್ಯ. ಅದಕ್ಕಾಗಿ 112 ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿ, ಕಾನೂನಿನ ರಕ್ಷಣೆಗೆ ಪೊಲೀಸ್ ಇಲಾಖೆಗೆ ಸಹಕರಿಸಬೇಕೆಂದರು.
ಪ್ರಾಧ್ಯಾಪಕ ಎಂ.ಎಸ್ ಭಟ್ ಮಾತನಾಡಿ, ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲೇ ಭಾರತದ ಸಂವಿಧಾನ ಶ್ರೇಷ್ಠವಾದುದು ಎಂದು ಹೇಳಿದರು. ವ್ಯಕ್ತಿತ್ವ ವಿಕಸನಕ್ಕೆ ಅವಕಾಶ ನೀಡಲಾದ ಕಲ್ಯಾಣ ರಾಜ್ಯ ಸ್ಥಾಪನೆಗೆ ಸಮಾಜವಾದಿ ಚಿಂತನೆಯನ್ನು ಸಂವಿಧಾನದಲ್ಲಿ ಸೇರಿಸಲಾಯಿತು. ಧರ್ಮ, ಜಾತಿ ಭೇದವಿಲ್ಲದೆ ಸಮಾನ ರಕ್ಷಣೆ, ಗೌರವವನ್ನು ಸಂವಿಧಾನ ನೀಡಿದೆ. ಅದಕ್ಕಾಗಿ ಸಾಮಾನ್ಯ ಜನರೂ ಸಂವಿಧಾನದ ಚೌಕಟ್ಟಿನಲ್ಲಿ ಬದುಕಲು ಅವಕಾಶ ನೀಡಿದೆ ಎಂದರು. ದೇಶ ಭದ್ರತೆಯಿಂದ ಸುಭೀಕ್ಷೆಯಾಗಿದ್ದರೂ ಆಂತರಿಕವಾಗಿ ಯುವಜನರು ದುಶ್ಚಟಗಳಿಂದ ಹಾಳಾಗುತ್ತಿದ್ದಾರೆ. ಮಾದಕ ದ್ರವ್ಯ ಮತ್ತು ಶೋಷಣಾ ಮುಕ್ತ ದೇಶ ರಚನೆ ಯುವಕರಿಂದ ಮಾತ್ರ ಸಾಧ್ಯ. ಅದನ್ನು ಅರಿತು ಯುವಕರು ಮುನ್ನಡೆಯಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ. ಜನಾರ್ಧನ ಭಟ್ ಮಾತನಾಡಿ, ಮಾನವೀಯ ಮೌಲ್ಯದ ಜೊತೆಗೆ ಎನ್.ಎಸ್.ಎಸ್. ಮಾದರಿಯಾಗಿದೆ. ಸಂವಿಧಾನದ ಅರಿವು ಮೂಡಿಸುವುದರಿಂದ ವಿದ್ಯಾರ್ಥಿಗಳಿಗೆ ಕರ್ತವ್ಯದ ಪ್ರಜ್ಞೆ ಮೂಡಿಸುತ್ತವೆ. ನಾವು ಸೇವೆ ಮಾಡಬೇಕು. ಅದು ಸಮಾಜಕ್ಕೆ ನೀಡಿದ ಕೊಡುಗೆ ಎಂದರು.
ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕ ಡಾ. ಗುರು ಹಿರೇಮಠ, ಪ್ರೊ. ಪ್ರಕಾಶ ಬಿ., ಪ್ರೊ. ವೀಣಾ ಸಾರಥಿ, ಡಾ. ಅನಿತಾ ಭಟ್, ಪ್ರೊ. ವಿಜಯಲಕ್ಷ್ಮೀ ದಾಸರಡ್ಡಿ, ಪ್ರೊ. ಮಂಜುನಾಥ, ಪ್ರೊ. ಮೇಘಾ ನಾಯ್ಕ ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.