ಅಂಕೋಲಾ: ಭಾರತದ ಸಂವಿಧಾನ ಅತೀ ಶ್ರೇಷ್ಠವಾದ ಸಂವಿಧಾನವಾಗಿದೆ. ಪ್ರಾಜ್ಞರು ಹಲವು ರೀತಿಯ ಅಧ್ಯಯನಗಳನ್ನು ಮಾಡಿ, ಸಂವಿಧಾನದಲ್ಲಿ ತಿದ್ದುಪಡಿಗಳನ್ನು ತಂದು ಅವಿರತ ಪರಿಶ್ರಮದಿಂದ ರಚನೆ ಮಾಡಿದ್ದಾರೆ. ಇದರ ಕಲ್ಪನೆಯೇ ಒಂದು ಅದ್ಭುತ ಎಂದು ಹಿರಿಯ ಸಿವಿಲ್ ಮತ್ತು ಜೆ.ಎಮ್.ಎಫ.ಸಿ ನ್ಯಾಯಾಧೀಶರಾದ ದಿನೇಶ.ಬಿ.ಜಿ. ಹೇಳಿದರು.
ಅವರು ತಾಲೂಕು ಕಾನೂನು ಸೇವಾ ಸಮಿತಿ ಅಂಕೋಲಾ ಹಾಗೂ ವಕೀಲರ ಸಂಘ ಅಂಕೋಲಾ ಇವರ ಸಂಯುಕ್ತ ಆಶ್ರಯದಲ್ಲಿ ಸಂವಿಧಾನ ದಿನದ ಅಂಗವಾಗಿ ಕಾನೂನು ಸಾಕ್ಷರತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ ಪ್ರತಿಯೊಂದು ಕಾನೂನುಗಳೂ ಸಂವಿಧಾನದ ತಾಯಿ, ಇದರ ಬಗ್ಗೆ ಪ್ರತಿಯೊಬ್ಬರಿಗೂ ಜಾಗ್ರತಿ ಅಗತ್ಯ ಎಂದರು.
ಸಿವಿಲ್ ಮತ್ತು ಜೆ.ಎಮ್.ಎಫ.ಸಿ ನ್ಯಾಯಾಧೀಶರಾದ ಜೆ.ರಂಗಸ್ವಾಮಿ ಮಾತನಾಡಿ ಭಾರತದ ವಿಧಾನ ಎಲ್ಲ ರಾಷ್ಟ್ರಗಳ ಸಂವಿಧಾನದ ವಿಷಯಗಳನ್ನು ಅಳೆದು ತೂಗಿ ರಚನೆ ಮಾಡಲಾಗಿದೆ. ಡಾ.ಬಿ.ಆರ್.ಅಂಬೇಡ್ಕರರವರು ಇದನ್ನು ರಚಿಸಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ ತನಗಾದ ಅನ್ಯಾಯ ಸಮಾಜದ ಕೆಳಸ್ಥರದ ಜನರಿಗೆ ಆಗಬಾರದೆಂಬ ಉದ್ದೇಶ ಮತ್ತು ಹಿಂದುಳಿದವರನ್ನು ಮುಖ್ಯವಾಹಿನಿಗೆ ತರುವ ಮಹದಾಶೆಯಿಂದ ಸಂವಿಧಾನವನ್ನು ರಚಿಸಿದ್ದಾರೆ. ಸಂವಿಧಾನವನ್ನು ಪ್ರತಿಯೊಬ್ಬರೂ ಅರ್ಥೈಸಿಕೊಳ್ಳಬೇಕು ಎಂದರು.
ಹಿರಿಯ ನ್ಯಾಯವಾದಿಗಳಾದ ಶಾಂತಾ ಹೆಗಡೆ, ಸರಕಾರಿ ಅಭಿಯೋಜಕ ಗಿರೀಶ ಪಟಗಾರ, ನ್ಯಾಯವಾದಿ ಎನ್ ಎಸ್ ನಾಯಕ ಮಾತನಾಡಿದರು. ನ್ಯಾಯವಾದಿ ಉಮೇಶ ನಾಯ್ಕ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ನ್ಯಾಯವಾದಿ ವಿನೋದ ಶಾನಭಾಗ ವಂದಿಸಿದರು. ನ್ಯಾಯವಾದಿಗಳಾದ ಎನ್.ಟಿ.ಕವರಿ, ಮಮತಾ ಕೆರೆಮನೆ, ಎಸ್.ಓ.ನಾಯ್ಕ, ದೀಕ್ಷಿತ ನಾಯಕ, ರೇಣುಕಾ, ಶಿರಸ್ತೆದಾರ ಸಂತೋಷ, ಅಶೋಕ, ವಕೀಲರು ಮತ್ತು ನ್ಯಾಯಾಲಯ ಸಿಬ್ಬಂದಿ ಉಪಸ್ಥಿತರಿದ್ದರು.