ಅಂಕೋಲಾ: ಸಾಣಿಕಟ್ಟಾದ ಶ್ರೀ ಸದ್ಗುರು ನಿತ್ಯಾನಂದ ಶಾಲೆಯಲ್ಲಿ ಲಾಯನ್ಸ್ ನ ಯುವಜನ ಸಬಲೀಕರಣ ಯೋಜನೆಯ ಅಡಿಯಲ್ಲಿ ಕ್ರೀಡೋಪಕರಣ ವಿತರಣಾ ಕಾರ್ಯಕ್ರಮವನ್ನು ಅಂಕೋಲಾದ ಲಾಯನ್ಸ್ ಕ್ಲಬ್ ಕರಾವಳಿ ವತಿಯಿಂದ ಹಮ್ಮಿಕೊಳ್ಳಲಾಯಿತು.
ಡಿಸ್ಟ್ರಿಕ್ಟ್ 317ಬಿ, ರಿಜನ್ ಸಿಕ್‍ಸನ ಝೋನ ಚೇರಪರ್ಸನ್ ಮಹಾಂತೇಶ ಕಾರ್ಯಕ್ರಮವನ್ನ ಉದ್ದೇಶಿಸಿ ಮಾತನಾಡಿ ಇಂದು ಕ್ರೀಡೆ ಕೇವಲ ಹವ್ಯಾಸ, ಮನೋರಂಜನೆಯ ಸಾಧನವಾಗಿ ಉಳಿದಿಲ್ಲ. ಕ್ರೀಡೆಯಲ್ಲಿ ಪರಿಶ್ರಮಪಟ್ಟು ಉತ್ತಮ ಸಾಧನೆ ಮಾಡುವ ಮೂಲಕ ಅತ್ಯುತ್ತಮ ಬದುಕನ್ನು ಕಟ್ಟಿಕೊಳ್ಳಬಹುದು. ಇಂದು ಕ್ರಿಕೆಟ್, ಟೆನಿಸ್, ಕಬಡ್ಡಿ, ಕುಸ್ತಿ ಆಟಗಾರರು ಕೋಟಿಗಟ್ಟಲೆ ಹಣವನ್ನು ಸಂಪಾದಿಸುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಲಾಯನ್ಸ್ ಅಧ್ಯಕ್ಷ ಡಾ. ಕರುಣಾಕರ ಕ್ರೀಡೆಗಳು ವಿದ್ಯಾರ್ಥಿಗಳ ದೈಹಿಕ, ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದರು. ಕಾರ್ಯದರ್ಶಿ ಸದಾನಂದ ಶೆಟ್ಟಿ ಮಾತನಾಡಿ, ಕ್ರೀಡೆಯ ಮಹತ್ವ ಅದರ ಪ್ರಯೋಜನದ ಕುರಿತು ವಿದ್ಯಾರ್ಥಿಗಳಿಗೆ ತಿಳಿಹೇಳಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಶಿಕ್ಷಕ ಶ್ರೀನಿವಾಸ ನಾಯಕ ಶಾಲೆ ಬೆಳೆದು ಬಂದ ರೀತಿ, ವಿದ್ಯಾರ್ಥಿಗಳ ಸಾಧನೆಯ ಕುರಿತು ವಿವರಿಸಿದರು.
ಮುಖ್ಯಾಧ್ಯಾಪಕಿ ಶಾರದಾ ನಾಯಕ ಸ್ವಾಗತಿಸಿ, ಲಾಯನ್ಸ್ ಕ್ಲಬ್‍ನವರ ಕೊಡುಗೆ ನೀಡಿದ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸಿದರು. ಶಿಕ್ಷಕ ಲಿಂಗಪ್ಪ ಶೇಡಗೇರಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ನಿತ್ಯಾನಂದ ನಾಯಕ ವಂದಿಸಿದರು. ಈ ಕಾರ್ಯಕ್ರಮವನ್ನು ದಿವಂಗತ ಕೃಷ್ಣ ಶೆಟ್ಟಿ ಅವರ ಸ್ಮರಣಾರ್ಥ ಅವರ ಮಕ್ಕಳು ಪ್ರಾಯೋಜಿಸಿದ್ದರು. ಕಾರ್ಯಕ್ರಮದಲ್ಲಿ ಲಾಯನ್ಸ್ ಸದಸ್ಯರಾದ ಎಸ್.ಆರ್. ಉಡುಪಿ, ಗಣಪತಿ ನಾಯಕ, ಶಂಕರ ಹುಲಸ್ವಾರ, ಸತೀಶ ನಾಯ್ಕ, ಸಂತೋಷ ಸಾಮಂತ, ಹಸನ ಶೇಖ ಉಪಸ್ಥಿತರಿದ್ದರು.