ಯಲ್ಲಾಪುರ: ಮುರ್ಡೇಶ್ವರದ ಶಿವನ ವಿಗ್ರಹದ ಚಿತ್ರವನ್ನು ವಿರೂಪಗೊಳಿಸಿ, ಐಸಿಎಸ್ ಹೆಸರಿನಲ್ಲಿ ಜಾಲತಾಣಗಳಲ್ಲಿ ಹರಿಯ ಬಿಟ್ಟು ಸಮಸ್ತ ಹಿಂದು ಬಾಂಧವರ ಭಾವನೆ ಘಾಸಿಗೊಳಿಸಿದ ಘಟನೆಯನ್ನು ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಖಂಡಿಸಿದ್ದಾರೆ.
ಅವರು ಈ ಕುರಿತು ಶುಕ್ರವಾರ ಪತ್ರಿಕಾ ಹೇಳಿಕೆ ನೀಡಿ, ಜಿಲ್ಲೆಯ ಭಟ್ಕಳದಲ್ಲಿ ಐಸಿಎಸ್ ಮತಾಂಧ ಶಕ್ತಿಗಳು ಸಕ್ರಿಯವಾಗಿರುವ ಬಗ್ಗೆ ಘಟನೆ ಪುಷ್ಠಿ ನೀಡುತ್ತದೆ. ಕೆಲವರ ಕುಚೋದ್ಯದಿಂದ ಇಂತಹ ಘಟನೆಗಳು ಪದೇ ಪದೇ ಮರುಕಳಿಸುತ್ತಿವೆ. ಹಿಂದುಗಳ ಮೌನವನ್ನು ನಮ್ಮ ದೌರ್ಬಲ್ಯ ಎಂದು ಭಾವಿಸ ಬಾರದು. ನಾವು ಇನ್ನೊಬ್ಬರ ಧಾರ್ಮಿಕ ಸ್ವಾತಂತ್ರ್ಯವನ್ನು ಗೌರವಿಸುತ್ತೇವೆ. ಆದರೆ ನಮ್ಮ ಧಾರ್ಮಿಕ ಭಾವನೆಯ ಅವಹೇಳನವನ್ನು ಎಂದೂ ಸಹಿಸುವುದಿಲ್ಲ. ಮತಾಂಧರು ಪ್ರಶಾಂತವಾದ ಜಿಲ್ಲೆಯ ನೆಮ್ಮದಿ ಕೆಡಿಸಲು ಟೆಸ್ಟ್ ಡೋಸ್ ನೀಡಿದ್ದಾರೆ. ಕಾರಣ ಸಂಬಂಧಪಟ್ಟವರು ಗಮನಿಸಿ, ತನಿಖೆಯನ್ನು ಚುರುಕುಗೊಳಿಸಿ, ಮತಾಂಧ ಶಕ್ತಿ ವಿಜ್ರಂಭಿಸುವುದಕ್ಕೆ ತಡೆ ಹಾಕಬೇಕೆಂದು ರಾಮು ನಾಯ್ಕ ಆಗ್ರಹಿಸಿದ್ದಾರೆ.