ಶಿರಸಿ: ಭಾರತೀಯ ಸಂವಿಧಾನವು ಜಗತ್ತಿನಲ್ಲಿಯೇ ಅತೀ ಶ್ರೇಷ್ಠ ಸಂವಿಧಾನವಾಗಿದ್ದು, ಗಣತಂತ್ರ ವ್ಯವಸ್ಥೆಯನ್ನು ಹೊಂದಿದ ಪ್ರಜಾ ಸತ್ತಾತ್ಮಕ ರಾಷ್ಟ್ರವನ್ನಾಗಿಸಿದೆ. ದೇಶದ ಪ್ರತೀ ಪ್ರಜೆಯೂ ಸಂವಿಧಾನದ ಬಗ್ಗೆ ಹೆಮ್ಮೆಯಿಂದಿರಬೇಕು. ಜಗತ್ತಿನ ಯಾವ ದೇಶದಲ್ಲಿಯೂ ಇರದಷ್ಟು ಜಾತಿ ಮತ ಸಾಂಸ್ಕೃತಿಕ ವೈವಿಧ್ಯತೆಯನ್ನು ನಾವು ಹೊಂದಿದ್ದು, ಎಲ್ಲಾ ಜನಾಂಗಕ್ಕೂ ಸಮಾನತೆಯನ್ನು ಒದಗಿಸುವ ಜಾತ್ಯತೀತ ಸಮಾಜವಾದಿ ಸಂವಿಧಾನ ನಮ್ಮದಾಗಿದೆ ಎಂದು ಎಂ.ಎಂ ಕಾಲೇಜಿನ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಪ್ರೊ.ಎಮ್ ಎನ್ ಭಟ್ ಹೇಳಿದರು.
ಅವರು ಸಂವಿಧಾನ ದಿವಸದ ಪ್ರಯುಕ್ತವಾಗಿ “ಒಂದು ದೇಶ ಒಂದು ಸಂವಿಧಾನ” ಎಂಬ ಧ್ಯೇಯದೊಂದಿಗೆ ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ “ಸಂವಿಧಾನದ ಅರಿವು” ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಕೇವಲ ಪ್ರಸ್ತಾವನೆಯನ್ನು ಮಾತ್ರವೇ ಓದುವುದರ ಮೂಲಕ ಇಡೀ ಸಂವಿಧಾನದ ಶ್ರೇಷ್ಠತೆಯನ್ನು ತಿಳಿಯಬಹುದಾಗಿದೆ. ಅತ್ಯುತ್ತಮ ಸಂವಿಧಾನವನ್ನ ನಮ್ಮ ಹಿರಿಯರು ನೀಡಿಹೋಗಿದ್ದಾರೆ. ದೇಶದಲ್ಲಿನ ಪ್ರತಿಯೊಬ್ಬರೂ ಸಂವಿಧಾನದ ನೈತಿಕ ಮೌಲ್ಯಗಳನ್ನು ತಿಳಿದು ಅದರ ಚೌಕಟ್ಟಿನಲ್ಲಿಯೇ ಮುನ್ನಡೆದಾಗ ಸಂವಿಧಾನ ರಚನೆಯ ಧ್ಯೇಯ ಸಾರ್ಥಕವಾಗುತ್ತದೆ ಮತ್ತು ದೇಶದ ಅಭ್ಯುದಯ ಸಾಧ್ಯವಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯೆ ಡಾ.ಕೋಮಲಾ ಭಟ್ ಮಾತನಾಡಿ ವಿದ್ಯಾರ್ಥಿಗಳಿಗೆ ಸಂವಿಧಾನ ದಿನದ ಶುಭಾಶಯ ಕೋರಿ ಯುವಜನತೆಯು ಸಂವಿಧಾನದ ಮಹತ್ವ ತಿಳಿದು ಜಾಗೃತವಾದಾಗ ನವಭಾರತದ ನಿರ್ಮಾಣ ಸುಲಭವಾಗುತ್ತದೆ ಎಂದರು.
ವಿದ್ಯಾರ್ಥಿಗಳಿಗೆ ಸಾಂವಿಧಾನಿಕ ಪ್ರತಿಜ್ಞಾವಿಧಿ ಬೋಧಿಸಿ ಸಾಮೂಹಿಕ ರಾಷ್ಟ್ರಗೀತೆ ಹಾಡುವ ಮೂಲಕ ಅರ್ಥವತ್ತಾದ ಆಚರಣೆಗೆ ಎಲ್ಲರೂ ಸಾಕ್ಷಿಯಾದರು.
ಕಾರ್ಯಕ್ರಮದಲ್ಲಿ ಸಿಂಧೂ ಭಟ್ ದೇಶಭಕ್ತಿ ಗೀತೆ ಹಾಡಿದಳು. ಪ್ರಾಧ್ಯಾಪಕರಾದ ಡಾ.ಕೆ ಎನ್ ರೆಡ್ಡಿ ಸ್ವಾಗತಿಸಿದರು. ಪತ್ರಿಕೋದ್ಯಮ ಮುಖ್ಯಸ್ಥ ರಾಘವೇಂದ್ರ ಜಾಜಿಗುಡ್ಡೆ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.