ಹಳಿಯಾಳ: ಕನ್ನಡ ನಮ್ಮ ಉಸಿರಾಗಲಿ, ನಮ್ಮ ರಾಜ್ಯದಲ್ಲಿ ಇತರ ಭಾಷಿಕರು ಇದ್ದಾರೆ, ಅವರೊಂದಿಗೆ ಆದಷ್ಟು ಕನ್ನಡದಲ್ಲೇ ವ್ಯವಹಾರ ಮಾಡಿ, ನಮ್ಮ ಕನ್ನಡಾಭಿಮಾನ ಮರೆಯಬೇಕು ಎಂದು ಹಳಿಯಾಳದ ಸಾಹಿತಿ ಹಾಗೂ ಬರಹಗಾರ್ತಿ ಭಾರತಿ ನಲವಡೆ ಹೇಳಿದರು.
ಅವರು ದೇಶಪಾಂಡೆ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಕನ್ನಡ ನಾಡು, ನುಡಿ, ಸಂಸ್ಕೃತಿ, ಪರಂಪರೆ ವೈಭವನ್ನು ಸೂಚಿಸುವ 7ನೇ ಕನ್ನಡ ಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿದರು. ಹಬ್ಬದ ಮೂಲಕ ಕನ್ನಡನಾಡಿನಲ್ಲಿ ಹುಟ್ಟಿ ಬೆಳೆದು ಸಾಧನೆಗೈದವರನ್ನು ಪ್ರೋತ್ಸಾಹಿಸುವ ಕೆಲಸ ನಮ್ಮದಾಗಬೇಕು ಎಂದರು.
ಅತಿಥಿ ಹಳಿಯಾಳ ಘಟಕದ ಸಾರಿಗೆ ವ್ಯವಸ್ಥಾಪಕ ಆರ್.ಎಲ್.ರಾಥೋಡ್ ವಿದ್ಯಾರ್ಥಿಗಳಿಗೆ ಕನ್ನಡ ಹಬ್ಬದ ಶುಭ ಕೋರಿ ತಮ್ಮ ಕಂಠದಿಂದ ಸುಂದರ ಕನ್ನಡ ಹಾಡುಗಳನ್ನು ಹಾಡುವುದರ ಮೂಲಕ ನೆರೆದವರಿಗೆ ರಂಜಿಸಿದರು.
ಕನ್ನಡ ರಕ್ಷಣಾ ವೇದಿಕೆಯ ಬಸವರಾಜ್ ಬೆಂಡಿಗೇರಿಮಠ ಹಾಗೂ ಜಯ ಕರ್ನಾಟಕ ಸಂಘಟನೆಯ ಸಿರಾಜರವರು ವಿದ್ಯಾರ್ಥಿಗಳು ಕನ್ನಡವನ್ನು ಬಳಸಿ, ಉಳಿಸಿ, ಬೆಳೆಸುವಂತೆ ವಿದ್ಯಾರ್ಥಿಗಳಿಗೆ ಸೂಚಿಸಿದರು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆವಹಿಸಿದ್ದ ಪ್ರಾಂಶುಪಾಲ ದಿನೇಶ ನಾಯ್ಕ ಮಾತನಾಡಿ, ವರ್ಷದಿಂದ ವರ್ಷಕ್ಕೆ ಭಿನ್ನವಾಗಿ ಆಚರಿಸುತ್ತಿರುವ ಕನ್ನಡಹಬ್ಬವು ಇದು ನಮ್ಮ ಸಂಸ್ಥೆಯ ಹಬ್ಬವಾಗಿ ಬೆಳೆದಿರುವುದು ಹೆಮ್ಮೆಯೆನಿಸಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಯರಾಜ ಮೂಳೆ, ಕಾರ್ಯದರ್ಶಿ ಸುಧಾಕರ ಉಪಸ್ಥಿತರಿದ್ದರು. ಕನ್ನಡ ಹಬ್ಬದ ಪ್ರಯುಕ್ತ ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳು, ಮನೋರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.