ಶಿರಸಿ: ಮಕ್ಕಳಲ್ಲಿ ಶಿಸ್ತು, ಸೇವಾ ಮನೋಭಾವ, ಭಾವೈಕ್ಯತೆ ಅಂಶಗಳನ್ನು ಬಿತ್ತುವ ಕಾರ್ಯವನ್ನು ಸೇವಾದಳ ಮಾಡಬೇಕು ಎಂದು ಬಿಇಒ ಎಂ.ಎಸ್.ಹೆಗಡೆ ಹೇಳಿದರು.
ಇಲ್ಲಿನ ಭಾರತ ಸೇವಾದಳ ಜಿಲ್ಲಾ ಕಚೇರಿಯಲ್ಲಿ ಶಿರಸಿ ತಾಲೂಕಾ ಮಟ್ಟದ ಶಿಕ್ಷಕರ ಪುನಶ್ಚೇತನಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಸೇವಾ ದಳವು ಭವಿಷ್ಯದ ಸಮಾಜ ಕಟ್ಟುವ ಕಾರ್ಯ ಮಾಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಭಾರತ ಸೇವಾದಳ ಕೇಂದ್ರ ಸಮಿತಿ ಸದಸ್ಯ ಡಾ.ಎಸ್.ಐ.ಭಟ್ಟ ಮಾತನಾಡಿ, ಪ್ರಸ್ತುತ ದಿನದಲ್ಲಿ ಸೇವಾದಳದ ಪಾತ್ರ ಅತೀ ಮಹತ್ವದ್ದಾಗಿದೆ. ಇಂದಿನ ಮಕ್ಕಳಿಗೆ ಪಠ್ಯದ ಜತೆಗೆ ಪಠ್ಯತೇರ ಚಟುವಟಿಕೆ ಅತೀ ಅವಶ್ಯ ಎಂದು ತಿಳಿಸಿದರು.
ಜಿಲ್ಲಾ ಸಮಿತಿ ಸದಸ್ಯರಾದ ಕೆ.ಎನ್.ಹೊಸ್ಮನಿ, ದೈಹಿಕ ಶಿಕ್ಷಣ ಪರಿವೀಕ್ಷಕ ಎಂ.ಜಿ.ನಾಯ್ಕ, ಶಿಕ್ಷಕ ಸಂಘದ ಅಧ್ಯಕ್ಷ ಸುರೇಶ ಪಟಗಾರ ಮಾತನಾಡಿದರು. ಜಿಲ್ಲಾ ಸಮಿತಿ ಸದಸ್ಯೆ ವೀಣಾ ಭಟ್ಟ, ಜಿಲ್ಲಾ ಶಿಕ್ಷಕ ಸಂಘದ ಕಾರ್ಯದರ್ಶಿ ಬಾಲಚಂದ್ರ ಪಟಗಾರ, ಹಿರಿಯ ಕಾರ್ಯಕರ್ತ ಪಿ.ಎನ್.ಜೋಗಳೇಕರ ಉಪಸ್ಥಿತರಿದ್ದರು. ಜಿಲ್ಲಾ ಸಂಘಟಕ ರಾಮಚಂದ್ರ ಹೆಗಡೆ ಪ್ರಾಸ್ತವಿಕ ಮಾತನಾಡಿದರು. ಶಿಕ್ಷಕ ಅಶೋಕ ಭಜಂತ್ರಿ ಸ್ವಾಗತಿಸಿದರು. ಉದಯ ಭಟ್ಟ ನಿರೂಪಿಸಿದರು.
ಸಭಾ ಕಾರ್ಯಕ್ರಮದ ನಂತರ ಸಾಮೂಹಿಕ ವ್ಯಾಯಾಮ ಪ್ರದರ್ಶನ, ಕವಾಯಿತ, ಲೇಜಿಮ್, ಡಂಬಲ್ಸ್ ಪ್ರದರ್ಶನ ನಡೆಯಿತು.