ಶಿರಸಿ: ಹೊಸ ಶಿಕ್ಷಣ ನೀತಿಯನ್ನು ತರಲು ಸರ್ಕಾರ ಮುಂದಾಗಿದೆ. ಆದರೆ ಯಾರಿಂದಲೂ ಸಲಹೆ ಪಡೆಯದೇ ಹೊಸ ನೀತಿ ತರುತ್ತಿರುವುದನ್ನು ನಾವು ಖಂಡಿಸುತ್ತೇವೆ ಎಂದು ಕಾಂಗ್ರೆಸ್ ಎನ್‍ಎಸ್‍ಯುಐ ಘಟಕದ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ ಎಂದರು.
ಅವರು ನಗರದ ಜಿಲ್ಲಾ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ ಕೊವೀಡ್ ಮುಗಿಯುತ್ತಿದ್ದಂತೆ ಹೊಸ ಶೈಕ್ಷಣಿಕ ನೀತಿಯನ್ನು ಜನರ ಮೇಲೆ ಬಲವಂತವಾಗಿ ಹೇರುತ್ತಿದೆ. ಐದು ವರ್ಷ ಮಕ್ಕಳು ಅಂಗನವಾಡಿಯಲ್ಲೆ ಕಲಿಯಬೇಕು ಎನ್ನುವುದು ಸರ್ಕಾರದ ವಾದವಾಗಿದೆ. ಈ ಹೊಸ ಶಿಕ್ಷಣ ನೀತಿಯಲ್ಲಿ ಸಾಕಷ್ಟು ಗೊಂದಲಗಳಿವೆ. ಭಾರತದ ಇತಿಹಾಸವನ್ನೇ ತಿರುಚುವ ಕೆಲಸಕ್ಕೆ ಕೈ ಹಾಕಿದ್ದಾರೆ. ದೇಶಾದ್ಯಂತ ಹಿಂದಿ ಭಾಷೆಯ ಹೇರಿಕೆ ಹೇರಳವಾಗಿ ಮಾಡುತ್ತಿದ್ದಾರೆ. ಹಿರಿಯ ಶಿಕ್ಷಣ ತಜ್ಞರಿಂದ ಮಾಹಿತಿಗಳನ್ನು ಪಡೆದು, ಸಾಧಕ- ಬಾಧಕಗಳ ಬಗ್ಗೆ ಚರ್ಚೆ ನಡೆಸಬೇಕು. ಎಲ್ಲದಕ್ಕೂ ಪ್ರವೇಶ ಪರೀಕ್ಷೆ ನಡೆಸುತ್ತಿರುವುದು ಹಣ ಮಾಡುವ ಹುನ್ನಾರವಾಗಿದೆ. ಈ ಹೊಸ ಶಿಕ್ಷಣ ನೀತಿಯಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ.
ಮಕ್ಕಳಿಗೆ ನೀಡುವ ಸ್ಕಾಲರ್ಶಿಪ್ ನಲ್ಲಿ ಸಹ ಕಡಿತ ಮಾಡಿದ್ದಾರೆ. ಈ ಹೊಸ ಶಿಕ್ಷಣ ನೀತಿಯ ನೀತಿ ನಿಯಮಗಳು ಶಿಕ್ಷಕರಿಗೂ ಸಹ ತಿಳಿದಿಲ್ಲ. ಯಾರಿಗೂ ಹೇಳದೇ ಕೇಳದೇ ಶಿಕ್ಷಣ ನೀತಿ ಬದಲಾಯಿಸುವುದು ಖಂಡನೀಯ. ಹಣನೀಡಿ ಪ್ರಮಾಣ ಪತ್ರ ಪಡೆಯುವ ಪದ್ದತಿಗೆ ಇವರು ನಾಂದಿ ಹಾಡುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸುಹಾನ್ ಆಳ್ವಾ, ರಫೀಕ್ ಹಲಿ, ಭರತ್ ರಾಮ್ ಗೌಡ, ಕುಮಾರ್ ಜೋಶಿ ಸೊಂದಾ ಉಪಸ್ಥಿತರಿದ್ದರು.