ಹೊನ್ನಾವರ: ಸರ್ಕಾರದಿಂದ ಗ್ರಾ.ಪಂಗೆ ಪ್ರತಿವರ್ಷ ಬಿಡುಗಡೆಯಾಗುವ ಅನುದಾನದಡಿ ನಡೆಯುವ ಕಾಮಗಾರಿ ಸಮಾಜದ ಗುತ್ತಿಗೆದಾರರಿಗೆ ನೀಡಬೇಕು. ಒಂದೊಮ್ಮೆ ಸಭೆಯಲ್ಲಿ ಇದು ತಿರಸ್ಕಾರವಾದಲ್ಲಿ ಅಥವಾ ತಕಾರಾರು ಮಾಡಿದಲ್ಲಿ ಈ ಬಗ್ಗೆ ಸದಸ್ಯರ ಹೆಸರು ಹಾಗೂ ಚರ್ಚಿಸಿದ ವಿಷಯಗಳ ಕುರಿತು ಹಿಂಬರವನ್ನು ನೀಡುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿಯ ಹೊನ್ನಾವರ ಶಾಖೆಯವರು ಕಾರ್ಯನಿರ್ವಹಣಾಧಿಕಾರಿಯವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ತಾಲೂಕಿನ ಗ್ರಾಮ ಪಂಚಾಯತಿಯಲ್ಲಿ ಪರಿಶಿಷ್ಠ ಜಾತಿ ಹಾಗೂ ಪಂಗಡವರಿಗೆ ಬರುವ 25% ಅನುದಾನ ಹಾಗೂ 15ನೇ ಹಣಕಾಸು ಮತ್ತು ಶಾಸನ ಬದ್ಧ 2ರ ಅನುದಾನದ ಮೂಲಕ ನಡೆಯುವ ಕಾಮಗಾರಿ ಗುತ್ತಿಗೆ ಸಮಾಜದವರಿಗೆ ನೀಡಬೇಕು ಹಾಗೂ ಸಮಾಜದವರಿಗೆ ಪ್ರತಿ ಗ್ರಾ.ಪಂ. ಒಂದು ಹುದ್ದೆಯನ್ನಾದರೂ ನೀಡುವಂತೆ ಒತ್ತಾಯಿಸಿದರು.
ತಾಲೂಕಿನ ಎಲ್ಲಾ ಗ್ರಾ.ಪಂ ವ್ಯಾಪ್ತಿಯಲ್ಲಿಯೂ ಸಮಾಜದವರಿದ್ದು, ಸಿಬ್ಬಂದಿಗಳ ಹುದ್ದೆ ಭರ್ತಿ ಮಾಡುವಾಗ ಸಮಾಜಕ್ಕೆ ಅವಕಾಶ ನೀಡುತ್ತಿಲ್ಲ. ಹಲವು ಪಂಚಾಯತಿಯಲ್ಲಿ ಒಂದು ಹುದ್ದೆಯನ್ನು ಸಮಾಜದವರಿಗೆ ನೀಡಿಲ್ಲ. ಇದು ಪಂಚಾಯತ್ ರಾಜ್ ಅಧಿನಿಯಮದ ಉಲ್ಲಂಘನೆಯಾಗಿದೆ. ಈ ಹಿಂದೆಯೇ ಸಿ.ಇ.ಓ ಆದೇಶವಿದ್ದರೂ ದುವರೆಗೂ ಪಾಲನೆಯಾಗುತ್ತಿಲ್ಲ. ಈ ಬಗ್ಗೆ ಗಂಭೀರ ಚಿಂತನೆ ನಡೆಸಿ ಸಮಾಜದವರಿಗೆ ಆದ್ಯತೆ ನೀಡುವಂತೆ ಕಟ್ಟುನಿಟ್ಟಿನ ಆದೇಶ ನೀಡಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಪ್ರಭಾರಿ ಕಾರ್ಯನಿರ್ವಹಣಾಧಿಕಾರಿ ಸುರೇಶ ನಾಯ್ಕ ಮನವಿ ಸ್ವೀಕರಿಸಿದರು. ಸಮಿತಿಯ ತಾಲೂಕ ಪ್ರಧಾನ ಕಾರ್ಯದರ್ಶಿ ಜಿ.ಟಿ.ಹಳ್ಳೇರ ಮಾತನಾಡಿ, ಪಂಚಾಯತಿ ಅಧಿನಿಯಮದ ಪ್ರಕಾರ ಪ್ರತಿ ಗ್ರಾ.ಪಂ. ಒಂದು ಹುದ್ದೆ ಮೀಸಲಿಡುವಂತೆ ಆದೇಶವಿದ್ದರೂ ಇದು ಪಾಲನೆಯಾಗುತ್ತಿಲ್ಲ. ಅಲ್ಲದೇ ಸಮುದಾಯದ ಮುಲಭೂತ ಸೌಕರ್ಯ ಒದಗಿಸಲು ಹಣ ಬಂದರೂ ಸಮಜದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. 15 ದಿನದೊಳಗೆ ಸಮಸ್ಯೆ ಬಗ್ಗೆ ಪ್ರತಿ ಗ್ರಾಮ ಪಂಚಾಯತಿಗೆ ಆದೇಶ ಹೊರಡಿಸದೆ ಹೊದಲ್ಲಿ ತಾಲೂಕ ಪಂಚಾಯತಿ ಆವರದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಈ ವೇಳೆ ತಾಲೂಕ ಸಂಚಾಲಕ ಎಚ್. ಪ್ರಭುಕುಮಾರ್, ಕುಮಟಾ ತಾಲೂಕ ಅಧ್ಯಕ್ಷ ಮಂಜುನಾಥ ಆಗೇರ, ಖಜಾಂಚಿ ಮಂಜುನಾಥ ಹಳ್ಳೇರ, ಪ್ರಧಾನ ಕಾರ್ಯದರ್ಶಿ ಶೇಖರ ಹಳ್ಳೇರ್ ಹಾಜರಿದ್ದರು.