ಮುಂಡಗೋಡ: ಕಾಡಾನೆಗಳ ಹಿಂಡು ಭತ್ತ ಹಾಗೂ ಗೋವಿನ ಜೋಳದ ಗದ್ದೆಗಳಿಗೆ ನುಗ್ಗಿ ಬೆಳೆಯನ್ನು ತಿಂದು ತುಳಿದು ನಾಶ ಪಡಿಸಿದ ಘಟನೆ ನಡೆದಿದೆ.
ತಾಲೂಕಿನ ಚವಡಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಬ್ಯಾನಳ್ಳಿ ಅರಣ್ಯದ ಅಂಚಿನ ಹೊಲಗಳಿಗೆ ಕಾಡಾನೆಗಳ ಹಿಂಡು ದಾಳಿ ಮಾಡಿ ನಾಶ ಪಡಿಸಿವೆ. ಬ್ಯಾನಳ್ಳಿ ಗ್ರಾಮದ ಸೋನು ವರಕ್ ಎಂಬುವರ ರೈತನ ಗದ್ದೆಯಲ್ಲಿ 3 ಎಕರೆಯಲ್ಲಿ ಬೆಳೆದ ಭತ್ತ ಮತ್ತು ಕಟಾವ ಮಾಡಿದ ಗೋವಿನ ಜೋಳದ ತೆನೆಯನ್ನು ಕಾಡಾನೆಗಳು ಹಾನಿ ಮಾಡಿವೆ ಹಾಗೂ ಅಲ್ಲದೆ ಅಕ್ಕ-ಪಕ್ಕದ ಭತ್ತದ ಗದ್ದೆಗಳಿಗೂ ದಾಳಿ ನಡೆಸಿ ಹಾನಿ ಮಾಡಿದ ಬಗ್ಗೆ ರೈತರು ತಿಳಿಸಿದರು.
ಕಾಡಾನೆಗಳ ಹಿಂಡು ತಾಲೂಕಿನ ಕಾತೂರ ವಲಯದ ಮರಗಡಿ, ಕಾತೂರ, ಸಿಂಗನಳ್ಳಿ, ಆಲಳ್ಳಿ ಗ್ರಾಮಗಳ ಭಾಗದ ಅರಣ್ಯದಲ್ಲಿ ಪ್ರತ್ಯಕ್ಷವಾಗಿ ರೈತರ ತೋಟ, ಗದ್ದೆಗಳಲ್ಲಿ ಬೆಳೆದ ಬೆಳೆಗಳನ್ನು ತಿಂದು ತುಳಿದು ಹಾನಿ ಮಾಡಿದ್ದವು. ಆದರೆ ಈಗ ಮುಂಡಗೋಡ ವಲಯದ ಬ್ಯಾನಳ್ಳಿಯಲ್ಲಿ ಕಾಡಾನೆಗಳು ಪ್ರತ್ಯಕ್ಷವಾಗಿ ಬೆಳೆ ಹಾನಿ ಮಾಡುತ್ತಿವೆ. ಈಗಾಗಲೇ ತಾಲೂಕಿನಲ್ಲಿ ಅಕಾಲಿಕ ಮಳೆಯಿಂದ ಅಪಾರ ಪ್ರಮಾಣದಲ್ಲಿ ರೈತನ ಬೆಳೆ ಹಾನಿಯಾಗುತ್ತಿದ್ದರೆ, ಮತ್ತೊಂದೆಡೆ ಕಾಡು ಪ್ರಾಣಿಗಳ ದಾಳಿಯಿಂದ ರೈತ ಬೆಳೆದ ಬೆಳೆ ಹಾನಿ ಮಾಡುತ್ತಿರುವುದರಿಂದ ರೈತರು ಮತ್ತೆ ಸಂಕಷ್ಟಕ್ಕೆ ಬಿದ್ದಿದ್ದಾನೆ.
ನನ್ನ ಹೊಲದಲ್ಲಿ ಭತ್ತ ಮತ್ತು ಗೋವಿನ ಜೋಳದ ಬೆಳೆಯನ್ನು ಕಾಡಾನೆ ಹಿಂಡು ನುಗ್ಗಿ ನಾಶ ಮಾಡಿದೆ. ನನ್ನ ಕಷ್ಟದಲ್ಲಿಯೂ ಮೂರು ಮಕ್ಕಳ ವಿದ್ಯಾಬ್ಯಾಸ ಮಾಡಿಸುತ್ತಿದ್ದೆ. ನಾಲ್ಕು ಲಕ್ಷ ರೂ ಸಾಲದ ಜೊತಗೆ ಜೀವನ ಸಾಗಿಸುತ್ತಿದ್ದೆ ಇನ್ನೇನು ಬೆಳೆ ಕೈಗೆ ಸಿಗುವಷ್ಟರಲ್ಲಿ ಕಾಡಾನೆಗಳು ದಾಳಿ ಮಾಡಿ ನಾಶ ಮಾಡಿರುವದರಿಂದ ದಿಕ್ಕೇ ತೋಚದಂತಾಗಿದೆ. ಯಾರಾದರೂ ಸಹಾಯ ಮಾಡಿ ಎಂದು ವಿಡಿಯೋ ಮೂಲಕ ಅಧಿಕಾರಿಗಳಿಗೆ ಸಾರ್ವಜನಿಕರಿಗೆ ಸಹಾಯ ಹಸ್ತವನ್ನು ಬ್ಯಾನಳ್ಳಿ ಗ್ರಾಮದ ರೈತ ಸೋನು ವರಕ್ ಕೇಳಿಕೊಂಡಿದ್ದಾರೆ.