ಮುಂಡಗೋಡ: ಅಕಾಲಿಕ ಮಳೆಯಿಂದ ತಾಲೂಕಿನಲ್ಲಿ ರೈತರ ಬೆಳೆ ಸಂಪೂರ್ಣ ಹಾಳಾಗಿದ್ದು ಶೀಘ್ರವಾಗಿ ರೈತರಿಗೆ ಬೆಳೆ ಪರಿಹಾರ ನೀಡಬೇಕೆಂದು ಮೊಳಕೆ ಒಡೆದ ಗೋವಿಜೋಳ ಕೈಯಲ್ಲಿ ಹಿಡಿದುಕೊಂಡು ಬಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ತಾಲೂಕು ಘಟಕದವರು ತಹಶೀಲ್ದಾರ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಬುಧವಾರ ಮನವಿ ಸಲ್ಲಿಸಿದರು.
ನವೆಂಬರ್’ನಲ್ಲಿ ಬಿದ್ದ ಅಕಾಲಿಕೆ ಮಳೆಯಿಂದಾಗಿ ಕಟಾವಿಗೆ ಬಂದ ಬೆಳೆಯು ಸಂಪೂರ್ಣವಾಗಿ ಹಾಳಾಗಿ ರೈತರ ಬೆಳೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಪ್ರತಿ ವರ್ಷವು ತಾಲೂಕಿನ ರೈತರು ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯ ಅಡಿಯಲ್ಲಿ ಬೆಳೆ ವಿಮೆ ಕಂಟುತ್ತಾ ಬಂದಿದೆ. ಈವರೆಗೆ ಕಂಪನಿಯಿಂದ ನಮಗೆ ಸರಿಯಾದ ಪ್ರಮಾಣದಲ್ಲಿ ಪರಿಹಾರ ಬಂದಿಲ್ಲ. ರೈತರ ಸಂಪೂರ್ಣ ಬೆಳೆ ಹಾನಿಯಾದ ಬಗ್ಗೆ ಎಲ್ಲರ ಗಮನಕ್ಕೆ ಬಂದಿದೆ. ಕಂಪನಿಯಿಂದ ಪರಿಹಾರ ಒದಗಿಸಿಕೊಡಬೇಕು. ಈಗಾಗಲೆ ಅರ್ಧದಷ್ಟು ರೈತರು ಬೆಳೆ ವಿಮೆ ತುಂಬಿಲ್ಲ. ಹಿಂದಿನ ವರ್ಷ ತೆಗೆದುಕೊಂಡ ಬೆಳೆ ಸಾಲವು ಬಾಕಿಯಾಗಿರುವುದರಿಂದ ಸಂಕಷ್ಟದಲ್ಲಿರುವ ರೈತರಿಗೆ ಬೆಳೆ ವಿಮೆ ತುಂಬಲು ತೊಂದರೆಯಾಗಿದ್ದು. ವಿಮಾ ಕಂಪನಿಯವರು 2021 ಆಗಸ್ಟ್ 16 ಕ್ಕೆ ಬೆಳೆ ವಿಮೆ ಅವಧಿಯನ್ನು ಮುಕ್ತಾಯಗೊಳಿಸಿದ್ದರಿಂದ ಸಾಕಷ್ಟು ರೈತರು ಈ ಯೋಜನೆಯಿಂದ ವಂಚಿತರಾಗಿದ್ದಾರೆ. ಕೂಡಲೇ ರೈತರ ಕಷ್ಟಕ್ಕೆ ಸ್ಪಂದಿಸಿ ಹಾನಿಯಾದ ಬಗ್ಗೆ ಎಲ್ಲ ರೈತರಿಗೂ ಏಕರೂಪದಲ್ಲಿ ಪರಿಹಾರ ನೀಡಬೇಕು.
ಈಗಾಗಲೇ ಕೃಷಿ ಇಲಾಖೆಯ ಅಧಿಕಾರಿಗಳು ಆದೇಶಿಸಿದ ಪ್ರಕಾರ ಅರ್ಜಿ ಫಾರಂ ನೀಡುತ್ತಿದ್ದು ಕಟಾವು ಮಾಡಿದ ಮತ್ತು ಗೋವಿನ ಜೋಳದ ಎದರು ನಿಂತು ಫೋಟೋ ಮಾಡಿಸಿ ಅರ್ಜಿ ಸಲ್ಲಿಸಲು ತಿಳಿದಿದ್ದು, ಅರ್ಜಿ ಸಲ್ಲಿಸಿದ ನಂತರ ಕಂಪನಿಯ ಏಜೆಂಟ್ ಬಂದು ಪರಿಶೀಲಿಸಲು ತಿಳಿಸಿರುತ್ತಾರೆ, ಆದರೆ ಕಂಪನಿಯ ವಿಜೆಂಟ್ ಬಂದು ಪರಿಶೀಲಿಸುವಷ್ಟರಲ್ಲಿ ರೈತರ ಅಲ್ಪ-ಸ್ವಲ್ಪ ಬೆಳೆಯನ್ನು ಬೇರೆಕಡೆಗೆ ಸ್ಥಳಾಂತರಿಸಿದ ನಂತರ ಎಜೆಂಟರು ಬಂದು ಎನನ್ನು ಪರೀಶೀಲಿಸುತ್ತಾನೆ ಎಂಬುವುದೇ ರೈತರಲ್ಲಿ ಕಾಡುತ್ತಿರುವ ಚಿಂತೆಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ಬೆಳೆ ವಿಮೆಯಿಂದ ವಂಚಿತರಾದ ರೈತರಿಗೆ ಪರಿಹಾರ ನೀಡಬೇಕು. ಅರ್ಜಿ ತೆಗೆದುಕೊಳ್ಳುವ ಅವಧಿಯನ್ನು ಇನ್ನು ಮೂರ‍್ನಾಲ್ಕು ದಿನಗಳವರೆಗೆ ವಿಸ್ತರಿಸಬೇಕು. ಕೃಷಿಗೆ ಸಂಬಂಧಪಟ್ಟ ಅರ್ಜಿಗಳನ್ನು ಶೀಘ್ರವಾಗಿ ಪರಿಶೀಲಿಸಿ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಬೇಕು. ರೈತರನ್ನು ಒಕ್ಕಲೆಬ್ಬಿಸುವ ಬದಲು ಶೀಘ್ರವಾಗಿ ರೈತರಿಗೆ ಸಂಪೂರ್ಣ ಬೆಳೆ ಸರಿಹಾರ ನೀಡಬೇಕೆಂದು ಅವರು ನೀಡಿದ ಮನವಿಯಲ್ಲಿ ತಿಳಿಸಿದ್ದಾರೆ. ಗ್ರೇಡ್-2 ತಹಶೀಲ್ದಾರ ಜಿ.ಬಿ.ಭಟ್ಟ ಮನವಿ ಸ್ವೀಕರಿಸಿದರು.
ಶೀಘ್ರದಲ್ಲಿ ಬೆಳೆ ಹಾನಿಯಾದ ರೈತರಿಗೆ ಬೆಳೆ ಪರಿಹಾರ ನೀಡಬೇಕು ಇಲ್ಲವಾದರೆ ಮುಂದಿನ ದಿನದಲ್ಲಿ ಉಗ್ರ ಪ್ರತಿಭಟನೆಯ ಮೂಲಕ ಹೋರಾಟ ಮಾಡುತ್ತೇವೆ ಎಂದು ರೈತ ಮುಖಂಡ ನಿಂಗಪ್ಪ ಕುರಬರ ತಿಳಿಸಿದರು.
ತಾಲೂಕು ಅಧ್ಯಕ್ಷ ಪೀರಜ್ಜ ಸಾಗರ, ಗುರುರಾಯ ರಾಯ್ಕರ, ಮಂಜುನಾಥ ಶೇಟ, ನಿಂಗಪ್ಪ ಕುರುಬರ, ಯಲ್ಲಪ್ಪ ಗೊಣೆನವರ, ಹನಮಂತಪ್ಪ ಯಲ್ಲಾಪುರ, ಅರ್ಜುನ ಶಿಗ್ಗಾಂವಿ, ಮಲ್ಲಪ್ಪ ಕುಸೂರ, ಯಲಪ್ಪ ಕೊಪ್ಪ, ಕಮಲಭಾಷಾ ಮತ್ತು ಮಾದೇವ ಬಿಜಾಪುರ ಮುಂತಾದವರಿದ್ದರು.